ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ

waste
ಎಸ್‌ಎಲ್‌ಆರ್‌ಎಂ ಘಟಕದಲ್ಲಿ ಹಸಿತ್ಯಾಜ್ಯ ವಿಲೇವಾರಿಗೆ ನಿರ್ಮಿಸಲಾದ ಕಾಂಪೋಸ್ಟ್ ಗೊಬ್ಬರ ಗುಂಡಿಯಲ್ಲಿ ತುಂಬಿರುವ ಗೊಬ್ಬರ
Published on

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

ಗಂಗೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ವಾರದಿಂದ ತ್ಯಾಜ್ಯ ಸಂಗ್ರಹ ಸ್ಥಗಿತಗೊಂಡಿದ್ದು, ಮನೆಗಳ ಮುಂದೆ ತ್ಯಾಜ್ಯದ ಚೀಲಗಳು ತುಂಬಿ ತುಳುಕುತ್ತಿವೆ. ಜತೆಗೆ ಬಂದರು ಪ್ರದೇಶದಲ್ಲಿರುವ ಘನ ಮತ್ತು ದ್ರವ ಸಂಪನ್ಮೂಲ ಘಟಕ ರೋಗ ಉತ್ಪತ್ತಿಯ ಕೇಂದ್ರವಾಗಿ ಮಾರ್ಪಟ್ಟಿದೆ.

ಗಂಗೊಳ್ಳಿಯಲ್ಲಿ ಹಲವು ತಿಂಗಳಿನಿಂದ ತ್ಯಾಜ್ಯ ವಿಲೇವಾರಿ ಸಮಸ್ಯೆ ಉಲ್ಬಣಗೊಂಡಿದ್ದು ಅಲ್ಲದೇ ದೊಡ್ಡ ಸಮಸ್ಯೆಯನ್ನೇ ಸೃಷ್ಟಿಸಿದೆ. ಗಂಗೊಳ್ಳಿ ಗ್ರಾಮ ಪಂಚಾಯಿತಿ ಆಡಳಿತ ಘನ ಮತ್ತು ದ್ರವ ಸಂಪನ್ಮೂಲ ಘಟಕದ ಕಾರ್ಯನಿರ್ವಹಣೆಯನ್ನು ಒಂದುವರೆ ವರ್ಷಗಳ ಹಿಂದೆ ಖಾಸಗಿ ಎನ್‌ಜಿಒ ಸಂಸ್ಥೆ ಟಿಪ್ಸ್‌ಗೆ ವಹಿಸಿಕೊಟ್ಟಿತ್ತು. 1300ಕ್ಕೂ ಹೆಚ್ಚು ಮನೆ ಮತ್ತು ವಾಣಿಜ್ಯ ಮಳಿಗೆಗಳಿಂದ ತ್ಯಾಜ್ಯ ಸಂಗ್ರಹಿಸಲಾಗುತ್ತಿತ್ತು.

ತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಗಂಗೊಳ್ಳಿಯ ಮೀನುಗಾರಿಕಾ ಬಂದರು ಸಮೀಪ ಸುಮಾರು 7.5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಎಸ್‌ಎಲ್‌ಆರ್‌ಎಂ ಘಟಕ ಮಿನಿ ಬೀಡಿನಗುಡ್ಡೆಯಂತಾಗಿದೆ. ಘಟಕದಲ್ಲಿ ಹಸಿಕಸ ವಿಲೇವಾರಿಗೆ ಕಾಂಪೋಸ್ಟ್ ಗೊಬ್ಬರದ ಗುಂಡಿ ನಿರ್ಮಾಣ ಸಹಿತ ಎಲ್ಲ ಸೌಕರ್ಯಗಳನ್ನು ಸ್ಥಳೀಯಾಡಳಿತ ಮಾಡಿದೆ. ಕಾಂಪೋಸ್ಟ್ ಗುಂಡಿಯಲ್ಲಿ ಗೊಬ್ಬರ ತುಂಬಿದ್ದರೂ ವಿಲೇವಾರಿಗೊಳಿಸದಿರುವುದರಿಂದ ಹಸಿಕಸ ನಿರ್ವಹಣೆಗೆ ಅಡ್ಡಿಯಾಗುತ್ತಿದೆ. ಎಸ್‌ಎಲ್‌ಆರ್‌ಎಂ ಘಟಕ ವಿಸ್ತರಣೆಯಾದರಷ್ಟೇ ಸಮರ್ಪಕ ಕಾರ್ಯನಿರ್ವಹಣೆ ಹಾಗೂ ತ್ಯಾಜ್ಯ ನಿರ್ವಹಣೆ ಸಾಧ್ಯ. ಎಸ್‌ಎಲ್‌ಆರ್‌ಎಂ ಘಟಕ ವಿಸ್ತರಣೆ ಉದ್ದೇಶದಿಂದ ಸ್ಥಳೀಯಾಡಳಿತ ಎದುರಾದ ಭೂಮಿ ಸಮಸ್ಯೆ ಹರಿಸುವತ್ತ ಆದ್ಯತೆ ನೀಡಬೇಕು ಎಂದು ಗಂಗೊಳ್ಳಿ ಜನತೆ ಒತ್ತಾಯಿಸಿದ್ದಾರೆ.

ಪ್ರಾಣಿಗಳಿಂದ ಪ್ಲಾಸ್ಟಿಕ್ ಸೇವನೆ

ತ್ಯಾಜ್ಯದ ರಾಶಿ ಇರುವ ಕಡೆಗಳಲ್ಲಿ ಜಾನುವಾರುಗಳು ಹಾಗೂ ನಾಯಿಗಳ ಹಿಂಡು ಆಗಮಿಸುತ್ತಿದ್ದು, ಸಂಗ್ರಹಗೊಂಡಿರುವ ತ್ಯಾಜ್ಯಗಳನ್ನು ತಿನ್ನುತ್ತಿವೆ. ಈ ಸಂದರ್ಭ ಪ್ಲಾಸ್ಟಿಕ್ ಕೂಡ ಪ್ರಾಣಿಗಳ ಹೊಟ್ಟೆ ಸೇರುತ್ತಿದ್ದು, ಹಲವು ಹಸುಗಳು, ನಾಯಿಗಳು ಜೀವನ್ಮರಣ ಸ್ಥೀತಿಯಲ್ಲಿ ಒದ್ದಾಡುತ್ತಿವೆ.

ಘಟಕದಲ್ಲಿ ಸಿಬ್ಬಂದಿ ಕೊರತೆ

ಘನ ಮತ್ತು ದ್ರವ ಸಂಪನ್ಮೂಲ ಘಟಕದಲ್ಲಿ ಇರುವ ಸಿಬ್ಬಂದಿ ಕೊರತೆ ಕೂಡ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿದೆ. ಗಂಗೊಳ್ಳಿ ಗ್ರಾಮಸಭೆಯಲ್ಲೂ ಎಸ್‌ಎಲ್‌ಆರ್‌ಎಂ ಘಟಕದ ಸಮಸ್ಯೆ ಕುರಿತು ಪ್ರಸ್ತಾಪವಾಗಿದ್ದು, ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಗಂಗೊಳ್ಳಿ ಗ್ರಾಮ ಪಂಚಾಯಿತಿ ಘನ ಮತ್ತು ದ್ರವ ಸಂಪನ್ಮೂಲ ಘಟಕದ ಕಾರ್ಯನಿರ್ವಹಣೆ ಉತ್ತಮವಾಗಿ ನಡೆಯುತ್ತಿದ್ದು, ಇಡೀ ಗ್ರಾಮದ ತ್ಯಾಜ್ಯ ಸಂಗ್ರಹಣೆಗೆ ಘಟಕ ವಿಸ್ತರಣೆ ಅಗತ್ಯ. ಹೆಚ್ಚಿನ ಜನರು ಪ್ಯಾಂಪರ್ಸ್‌ನ್ನು ನೀಡುತ್ತಿದ್ದು, ವಿಲೇವಾರಿ ಕಷ್ಟವಾಗುತ್ತಿದೆ. ಘಟಕದಲ್ಲಿ ಸಮಸ್ಯೆ ಉಂಟಾಗಲು ಇದೇ ಕಾರಣ. ಘಟಕ ವಿಸ್ತರಣೆಗೆ ಜಾಗದ ಸಮಸ್ಯೆಯೂ ಇದೆ. ಶೀಘ್ರವೇ ಎಲ್ಲ ಬಗೆಹರಿಸಲಾಗುವುದು.-ಉಮಾಶಂಕರ, ಪಿಡಿಒ ಗಂಗೊಳ್ಳಿ ಗ್ರಾಮ ಪಂಚಾಯಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net