

ಶಿರಸಿ: ಹೆಂಡತಿಯೊಂದಿಗೆ ಜಗಳವಾಡುತ್ತಿದ್ದಾಗ ಬಿಡಿಸಲು ಬಂದಿದ್ದ ಅತ್ತೆಗೆ ಕಟ್ಟಿಗೆಯಿಂದ ಹೊಡೆದು ಕೊಂದಿದ್ದವನಿಗೆ ನಗರದ 1ನೇ. ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗು 36 ಸಾವಿರ ರೂ. ದಂಡ ಮತ್ತು ಮೃತರ ಕುಟುಂಬಕ್ಕೆ 50 ಸಾವಿರ ರೂ. ನೀಡುವಂತೆ ಆದೇಶಿಸಿ ತೀರ್ಪು ನೀಡಿದೆ.
ಮುಂಡಗೋಡ ತಾಲೂಕಿನ ಮೈನಳ್ಳಿಯ ಸುರೇಶ ದಾದಾಪೀರ ಸಿಂಧೆ ಶಿಕ್ಷೆಗೆ ಒಳಗಾದ ಅಪರಾಧಿ.
2016ರ ಡಿ. 15ರಂದು ಈತ ಕೃತ್ಯ ಎಸಗಿದ್ದ. ಈತ ಹೆಂಡತಿಯೊಡನೆ ಜಗಳವಾಡುತ್ತಿದ್ದ ಸಂದರ್ಭದಲ್ಲಿ ಮಾವನಾದ ಬೈರು ಪೀರಾಜಿ ಸಾಳೊಂಕೆ ಸುರೇಶನಿಗೆ ಬುದ್ಧಿವಾದ ಹೇಳಿದ್ದರು. ಆದರೆ, ಆತನನ್ನೇ ಅವಾಚ್ಯ ಶಬ್ದದಿಂದ ಬೈದು ಹಲ್ಲೆ ನಡೆಸಿದ್ದಾನೆ. ಈ ವೇಳೆ ಅತ್ತೆ ತುಳಸಾಬಾಯಿ ಬಿಡಿಸಲು ಬಂದಿದ್ದಳು. ಆಕೆಯೊಂದಿಗೂ ಜಗಳವಾಡಿದ್ದ ಅಪರಾಧಿ, ತುಳಸಾಬಾಯಿಗೆ ತಲೆಗೆ ಹೊಡೆದಿದ್ದ. ತೀವ್ರ ರಕ್ತಸ್ರಾವವಾಗಿದ್ದ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದಳು. ಈ ಕುರಿತಂತೆ ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಕುರಿತು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಒಂಬತ್ತು ವರ್ಷಗಳ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ನ್ಯಾಯಾಧೀಶರಾದ ಕಿರಣ ಕಿಣಿ ಅವರು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗು 36ಸಾವಿರ ರೂ ದಂಡ ಮತ್ತು ಮೃತರ ಕುಟುಂಬಕ್ಕೆ 50ಸಾವಿರ ರೂ ಪರಿಹಾರ ನೀಡುವ ಆದೇಶ ಹೊರಡಿಸಿದ್ದಾರೆ.
ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ರಾಜೇಶ ಮಳಗಿಕರ್ ವಾದ ಮಂಡಿಸಿದ್ದರು. ದೋಷಾರೋಪಣೆ ಪಟ್ಟಿಯನ್ನು ಅಂದಿನ ಪೋಲಿಸ್ ನಿರೀಕ್ಷಕ ಕಿರಣಕುಮಾರ ನಾಯಕ ಸಲ್ಲಿಸಿದ್ದರು.