ಇಬ್ಬರ ಜಗಳ ಬಿಡಿಸಲು ಹೋದ ವ್ಯಕ್ತಿಗೇ ಗೂಸ..ವೀಡಿಯೋ ವೈರಲ್​

hate
Published on

ಲಖನೌ: ಇಬ್ಬರು ಗಂಭೀರ ಜಗಳವಾಡುತ್ತಿದ್ದಾಗ ತಡೆಯಲು ಮುಂದಾದ ಮೂರನೇ ವ್ಯಕ್ತಿಗೆ ಭೀಕರ ಅನುಭವವಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ವೈರಲ್ ಆಗಿದೆ .

ದೆಹಲಿ ಮೆಟ್ರೋ ನಿಲ್ದಾಣದಲ್ಲಿ ಘಟನೆ ನಡೆದಿರುವ ಈ ಘಟನೆ ನೆಟ್ಟಿಗರನ್ನು ಮೂಕವಿಸ್ಮಿತರನ್ನಾಗಿಸುತ್ತಿದೆ. ಒಳ್ಳೆಯದಕ್ಕೆ ಹೋದರೆ ಕೆಟ್ಟದ್ದನ್ನು ಎದುರಿಸುವುದು ಎಂದರೆ ಇದೇನಾ ಎಂದು ಕಾಮೆಂಟ್​ ಮಾಡುತ್ತಿದ್ದಾರೆ.

ವೀಡಿಯೋದಲ್ಲಿ ಕಂಡುಬರುವಂತೆ, ಇಬ್ಬರು ವ್ಯಕ್ತಿಗಳು ಮೆಟ್ರೋ ನಿಲ್ದಾಣದಲ್ಲಿ ಯಾವುದೋ ವಿಷಯಕ್ಕೆ ಜಗಳವಾಡಲು ಪ್ರಾರಂಭಿಸಿದರು. ಟಿಕೆಟ್ ಕೌಂಟರ್‌ನಲ್ಲಿ ಆರಂಭವಾದ ಅವರ ಜಗಳ ಇದ್ದಕ್ಕಿದ್ದಂತೆ ಗಂಭೀರ ಸ್ವರೂಪ ಪಡೆಯಿತು. ಇಬ್ಬರೂ ಒಬ್ಬರ ಕೆನ್ನೆಗೆ ಒಬ್ಬರು ಬಾರಿಸಿಕೊಂಡರು. ಇದನ್ನೆಲ್ಲ ನೋಡಿದ ಮತ್ತೊಬ್ಬ ವ್ಯಕ್ತಿ ಇಬ್ಬರನ್ನೂ ಸಮಾಧಾನಪಡಿಸಿ ಜಗಳ ಬಿಡಿಸಲು ಯತ್ನಿಸಿದ್ದಾರೆ.

ಆದರೆ ಜಗಳವಾಡುತ್ತಿದ್ದ ವ್ಯಕ್ತಿಗಳಲ್ಲಿ ಒಬ್ಬ ಮತ್ತೊಬ್ಬನನ್ನು ಹೊಡೆಯುವ ಭರದಲ್ಲಿ ಜಗಳ ತಡೆಯಲು ಯತ್ನಿಸಿದ ವ್ಯಕ್ತಿ ತಲೆಗೆ ಹೊಡೆದಿದ್ದಾನೆ. ಈ ಬೆಳವಣಿಗೆಯಿಂದ ಆತ ಸ್ವಲ್ಪ ಹೊತ್ತು ಆಘಾತಕ್ಕೊಳಗಾಗಿರುವುದು ವೀಡಿಯೊದಲ್ಲಿ ಸ್ಪಷ್ಟವಾಗಿ ನೋಡಬಹುದಾಗಿದೆ.

ವೀಡಿಯೋ ನೋಡಿದ ಅನೇಕರು ಜಗಳ ತಡೆಯಲು ಯತ್ನಿಸಿದ ಮೂರನೇ ವ್ಯಕ್ತಿಯ ಬಗ್ಗೆ ಅನುಕಂಪ ವ್ಯಕ್ತಪಡಿಸಿದ್ದಾರೆ. ಒಳ್ಳೆಯದನ್ನು ಮಾಡುವುದರಿಂದ ಕೆಟ್ಟದ್ದನ್ನು ಎದುರಿಸಬೇಕಾಗುತ್ತದೆ. ಇದು ನಿಜವಾಗಿಯೂ ಅನ್ಯಾಯ. ಇಂತಹ ಬೆಳವಣಿಗೆಗಳಿಂದ ಜಗಳ ಬಿಡಿಸಲು ಯಾರೂ ಮುಂದಾಗುವುದಿಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

ದೆಹಲಿ ಮೆಟ್ರೋದಲ್ಲಿ ಯಾವಾಗಲೂ ಗದ್ದಲ, ಗಲಾಟೆ ನಡೆಯುತ್ತಲೇ ಇರುತ್ತದೆ. ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ. ಈ ವೀಡಿಯೊ ಪ್ರಸ್ತುತ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ಟ್ರೆಂಡ್​ ಸೃಷ್ಟಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net