ಕದ್ದ ಬೈಕನ್ನು ಹಿಂತಿರುಗಿಸಲು 450 ಕಿ.ಮೀ ಪ್ರಯಾಣಿಸಿದ; ಹಣದೊಂದಿಗೆ ಕ್ಷಮಾಪಣಾ ಪತ್ರ ಬರೆದು ಪ್ರಾಮಾಣಿಕತೆ ಮೆರೆದ ಕಳ್ಳ

Bike
Published on

ಚೆನ್ನೈ: ನಾವು ಪ್ರತಿನಿತ್ಯ ಕಳ್ಳತನಕ್ಕೆ ಸಂಬಂಧಿಸಿದ ಚಿತ್ರ ವಿಚಿತ್ರ ಘಟನೆಗಳನ್ನು ಕೇಳುತ್ತಿರುತ್ತೇವೆ. ದೋಚಲು ಹೋದ ಕಳ್ಳನೊಬ್ಬ ಏನು ಸಿಗದೆ ಮನೆಯಲ್ಲಿದ್ದ ಮಾಲಕಿಗೆ ಮುತ್ತಿಟ್ಟಿದ್ದು, ನಿದ್ರೆ ತಾಳಲಾರದೆ ಸೂಪರ್ ಮಾರ್ಕೆಟ್​ನಲ್ಲೇ ಮಲಗಿ ಪೊಲೀಸರಿಗೆ ಅತಿಥಿಯಾಗಿರುವ ಹಲವು ಘಟನೆಗಳನ್ನು ನಾವು ನಿರಂತರವಾಗಿ ಕೇಳಿದ್ದೇವೆ. ಆದರೆ, ಗಮನಾರ್ಹ ಘಟನೆಯೊಂದರಲ್ಲಿ ಕಳ್ಳನೊಬ್ಬ ಕದ್ದ ಬೈಕನ್ನು (Bike) ಮಾಲೀಕರಿಗೆ ಕ್ಷಮೆಯಾಚಿಸಿ ಹಣದೊಂದಿಗೆ ವಾಪಸ್​ ನೀಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಸದ್ಯ ಈ ವಿಚಾರ ಎಲ್ಲರ ಗಮನ ಸೆಳೆಯುತ್ತಿದೆ. 

ತಮಿಳುನಾಡಿನ ಶಿವಗಂಗಾ ಜಿಲ್ಲೆಯ ತಿರುಪ್ಪುವನಂ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಡಿ. ಪಳಯೂರು ಗ್ರಾಮದ ವೀರಮಣಿ ಎಂಬುವವರ ಬೈಕನ್ನು (Bike) ಕಳ್ಳನೊಬ್ಬ ಎಗರಿಸಿದ್ದನ್ನು. ಬೈಕ್ ಕಳ್ಳತನಕ್ಕೆ ಸಂಬಂಧಿಸಿದಂತೆ ವೀರಮಣಿ ಪೊಲೀಸ್​  ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ, ಪೊಲೀಸರು ಬೈಕನ್ನು ಹುಡುಕುವ ಮುನ್ನವೇ ಕಳ್ಳ ಮಾಲೀಕರಿಗೆ ಅವರ ವಸ್ತುವನ್ನು ಹಿಂತಿರುಗಿಸಿದ್ದು, ಹಣ ಹಾಗೂ ಪತ್ರವನ್ನು ಬೈಕ್​ ಜೊತೆಯಲ್ಲಿ ಇರಿಸಿದ್ಧಾನೆ.

ಘಟನೆ ಕುರಿತು ಮಾತನಾಡಿರುವ ಸ್ಥಳೀಯ ಪೊಲೀಸ್​ ಅಧಿಕಾರಿಯೊಬ್ಬರು, ವೀರಮಣಿ ಎಂದಿನಂತೆ ರಾತ್ರಿ ತನ್ನ ಮನೆಯ ಮುಂದೆ ಬೈಕ್‌ (Bike) ನಿಲ್ಲಿಸಿ ನಂತರ ಒಳಗೆ ಹೋಗಿ ಮಲಗಿದ್ದ. ಆದರೆ, ಮರುದಿನ ಬೆಳಗ್ಗೆ ಎದ್ದಾಗ ಬೈಕ್‌ ಕಳ್ಳತನವಾಗಿತ್ತು. ಇದರಿಂದ ಆಘಾತಕ್ಕೊಳಗಾದ ವೀರಮಣಿ ಮತ್ತು ಆತನ ಕುಟುಂಬ ಸದಸ್ಯರು ಬೈಕ್‌ಗಾಗಿ ಎಲ್ಲೆಡೆ ಹುಡುಕಿದರು. ಆದರೆ ವಾಹನ ಎಲ್ಲೂ ಪತ್ತೆಯಾಗಲಿಲ್ಲ. ಯಾರೋ ಬೈಕ್‌ ಕದ್ದಿದ್ದಾರೆ ಎಂದು ಖಚಿತಪಡಿಸಿಕೊಂಡ ನಂತರ ವೀರಮಣಿ ತಿರುಪ್ಪುವನಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದರು. ಅಧಿಕಾರಿಗಳು ಪ್ರಕರಣವನ್ನು ದಾಖಲಿಸಿಕೊಂಡು, ಬೈಕ್‌ಗಾಗಿ ಹುಡುಕಾಟ ನಡೆಸಿದರು. ಆದ್ರೆ ಪೊಲೀಸರಿಗೂ ಬೈಕ್‌ ಸಿಕ್ಕಿರಲಿಲ್ಲ.

ಫೆಬ್ರವರಿ 24ರ ರಾತ್ರಿ ವೀರಮಣಿ ಮನೆ ಮುಂಭಾಗ ಬಯಕ್ ನಿಂತಿದ್ದನ್ನು ಕಂಡು ಕುಟುಂಬಸ್ಥರು ಸಂತಸಗೊಂಡರು. ಬಳಿಕ ಅದರ ಮೇಲೆ ಪತ್ರ ಹಾಗೂ 1,500 ರೂ. ಹಣವನ್ನು ಇರಿಸಿದ್ದಾನೆ. ಬೈಕ್ ಕಳ್ಳತನ ಸಂಬಂಧ ವೀರಮಣಿ ದಾಖಲಿಸಿದ್ದ ದೂರನ್ನು ಹಿಂಪಡೆದಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ ಎಂದು ಸ್ಥಳೀಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪತ್ರದಲ್ಲೇನಿದೆ? 

ನಾನು ಬೇರೆ ಸ್ಥಳದಿಂದ ಬರುತ್ತಿರುವಾಗ ಹೆದ್ದಾರಿಯ ಬಳಿ ಸಮಸ್ಯೆಗೆ ಸಿಲುಕಿದೆ. ಆ ಸಂದರ್ಭದಲ್ಲಿ ನಿಮ್ಮ ಬೈಕನ್ನು ನೋಡಿದೆ. ಆ ತಕ್ಷಣಕ್ಕೆ ನಿಮ್ಮ ಬೈಕನ್ನು ಅಗತ್ಯಕ್ಕೆ ತೆಗೆದುಕೊಂಡು ಹೋಗುವುದು ತಪ್ಪೆಂದು ಅನಿಸಲಿಲ್ಲ. ಹೀಗಾಗಿ ನಾನು ನಿಮ್ಮ ಬೈಕನ್ನು ತೆಗೆದುಕೊಂಡು ಹೋದೆ.  ಆದರೆ ನಂತರ ಹೀಗೆ ಮಾಡಿದ್ದು, ದೊಡ್ಡ ತಪ್ಪು ಎಂಬ ಭಾವನೆ ನನ್ನಲ್ಲಿ ಕಾಡಲು ಶುರ ಮಾಡಿತು. ಅದಕ್ಕಾಗಿಯೇ ನಾನು 450 ಕಿಲೋಮೀಟರ್‌ ಹಿಂದಕ್ಕೆ ಪ್ರಯಾಣಿಸಿ ನಿಮ್ಮ ಬೈಕನ್ನು ಹಿಂತಿರುಗಿಸುತ್ತಿದ್ಧೇನೆ. ತುರ್ತು ಸಂದರ್ಭದಲ್ಲಿ ನಿಮ್ಮ ಬೈಕ್‌ ನನಗೆ ತುಂಬಾ ಸಹಾಯ ಮಾಡಿದೆ. ಅದಕ್ಕಾಗಿ ನಿಮಗೆ ನಾನು ಋಣಿಯಾಗಿದ್ದೇನೆ. ಜೊತೆಗೆ ಪೆಟ್ರೋಲ್‌ ಹಣ 1500 ರೂ. ಅನ್ನು ಕೂಡಾ ಪತ್ರದ ಜೊತೆಗೆ ಇಟ್ಟಿದ್ದೇನೆ ಎಂದು ಕಳ್ಳ ಪತ್ರದಲ್ಲಿ ಬರೆದಿರುವುದಾಗಿ ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net