ಅಪ್ಪನ ದೇಹವನ್ನು ಡ್ರಮ್​ನಲ್ಲಿ ಮುಚ್ಚಿಟ್ಟರು... ಪತ್ನಿಯ ಕಾಮದಾಟಕ್ಕೆ ಪತಿ ಬಲಿ! ಪುತ್ರನ ಕಣ್ಣೆದುರೇ ಬರ್ಬರ ಹತ್ಯೆ | Blue Drum

ವಿಜಯವಾಣಿ - 2025-08-19T191614.129
Published on

Blue Drum: ರಾಜಸ್ಥಾನದ ಅಲ್ವಾರ್‌ನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಡ್ರಮ್‌ನಲ್ಲಿ ವ್ಯಕ್ತಿಯೊಬ್ಬರ ಕೊಳೆತ ಶವ ಪತ್ತೆಯಾಗಿರುವುದು ಭಾರಿ ಸಂಚಲನ ಮೂಡಿಸಿದೆ. ಮನೆ ಮಾಲೀಕರು ಯಾವುದೋ ಒಂದು ಕೆಲಸದ ನಿಮಿತ್ತ ಮೊದಲ ಮಹಡಿಗೆ ಹೋದಾಗ ಅಲ್ಲಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದೇ ತಡ ಇಬ್ಬರ ಪಾಪದ ಕೃತ್ಯ ಬಟಾಬಯಲಾಗಿದೆ.

ತಿಜಾರಾ ಜಿಲ್ಲೆಯ ಆದರ್ಶ ಕಾಲೋನಿಯಲ್ಲಿ ಈ ಘಟನೆ ವರದಿಯಾಗಿದೆ. ಪೊಲೀಸರ ತನಿಖೆಯಲ್ಲಿ, ಡ್ರಮ್​ನಲ್ಲಿ ಶವವಾಗಿ ಪತ್ತೆಯಾದ ವ್ಯಕ್ತಿ, ಉತ್ತರ ಪ್ರದೇಶದ ನಿವಾಸಿ. ಆದರೆ, ಆತ ರಾಜಸ್ಥಾನದ ಅಲ್ವಾರ್​ನಲ್ಲಿರುವ ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡುತ್ತಿದ್ದ. ಹೆಂಡತಿಯ ಕಾಮದಾಟಕ್ಕೆ ಬಲಿಯಾದ ವ್ಯಕ್ತಿಯನ್ನು ಹಂಸರಾಜ್ ಎಂದು ಗುರುತಿಸಲಾಗಿದೆ. ಪ್ರಿಯಕರನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಪಾಪಿ ಪತ್ನಿ, ಗಂಡನನ್ನು ಮಗನ ಎದುರೇ ಬರ್ಬರವಾಗಿ ಹತ್ಯೆಗೈದು, ಶವವನ್ನು ನೀಲಿ ಬಣ್ಣದ ಡ್ರಮ್‌ನಲ್ಲಿಟ್ಟು, ಅಲ್ಲಿಂದ ಪರಾರಿಯಾಗಿದ್ದಳು.

ಡ್ರಮ್​ನಲ್ಲಿ ಪತಿಯ ದೇಹ!

ಆದರ್ಶ ಕಾಲೋನಿಯ ಮನೆಯಿಂದ ಕೆಟ್ಟ ವಾಸನೆ ಬರುತ್ತಿರುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿತು. ಪೊಲೀಸ್ ತಂಡ ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದಾಗ ಮನೆಯ ಟೆರೇಸ್‌ನಲ್ಲಿ ನೀಲಿ ಡ್ರಮ್‌ನಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಹಂಸರಾಜ್ ಅಲಿಯಾಸ್ ಸೂರಜ್ ಎಂದು ಗುರುತಿಸಲಾಗಿದೆ. ಮೃತದೇಹವನ್ನು ಡ್ರಮ್​ನಲ್ಲಿ ಉಪ್ಪಿನಿಂದ ಮುಚ್ಚಿಟ್ಟ ಕಿಡಿಗೇಡಿಗಳು, ಅದನ್ನು ಮುಚ್ಚಳದಿಂದ ಸೀಲ್​ ಮಾಡಿದ್ದರು ಎಂದು ಅಲ್ವಾರ್​ನ ಉಪ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪುತ್ರನ ಕಣ್ಣೆದುರೇ ಕೊಲೆ

ಈ ಪ್ರಕರಣವನ್ನು ಭೇದಿಸಿರುವ ಖಾಕಿ ಪಡೆ, ಆರೋಪಿಗಳನ್ನು ಕಡೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳೆಗೆ ಮೂವರು ಮಕ್ಕಳಿದ್ದು, ಅವರನ್ನು ಕುಟುಂಬಸ್ಥರಿಗೆ ನೋಡಿಕೊಳ್ಳುವಂತೆ ಜವಾಬ್ದಾರಿ ಹಸ್ತಾಂತರಿಸಲಾಗಿದೆ. ಪೊಲೀಸರ ತನಿಖೆಗೆ ಬಲವಾದ ಸಾಕ್ಷಿ ಮೃತ ವ್ಯಕ್ತಿಯ ಕಿರಿಯ ಪುತ್ರ (8). ಆತ ನೀಡಿದ ಒಂದಷ್ಟು ಹೇಳಿಕೆಗಳು ಸದ್ಯ ಪೊಲೀಸರನ್ನೇ ಅಚ್ಚರಿಗೆ ದೂಡಿದೆ. ತನ್ನ ಕಣ್ಣೆದುರೇ ತಾಯಿ ಮತ್ತು ಆಕೆಯ ಪ್ರಿಯಕರ ಕೊಲೆ ಮಾಡಿದ್ದನ್ನು ಬಾಲಕ ಹೇಳಿದ್ದಾನೆ.

ಬಾಲಕ ಹೇಳಿದ್ದಿಷ್ಟು

ಘಟನೆಯನ್ನು ವಿವರಿಸಿರುವ ಮೃತ ಹನ್ಸರಾಜ್​ ಕಿರಿಯ ಪುತ್ರ ಹರ್ಷಲ್, "ನನ್ನ ತಂದೆ, ತಾಯಿ ಮತ್ತು ಇನ್ನೊಬ್ಬ ವ್ಯಕ್ತಿ ನಡುವೆ ಜಗಳ ಶುರುವಾಯಿತು. ಈ ವೇಳೆ ಅಪ್ಪನ ಮೇಲೆ ದಾಳಿ ನಡೆಯಿತು. ನನ್ನಮ್ಮ, ನಮ್ಮನ್ನ ನಿದ್ರೆಗೆ ಜಾರುವಂತೆ ಹೇಳಿದರು. ನಾವು ಮಲಗಿದೆವು. ಆ ಬಳಿಕ ಎಚ್ಚರಗೊಂಡಾಗ ಅಮ್ಮ ಗಾಬರಿಯಲ್ಲಿದ್ದರು. ಮನೆಯಲ್ಲಿ ನೀರು ತುಂಬಿಸಲು ಇಟ್ಟಿದ್ದ ಡ್ರಮ್​ನಲ್ಲಿ ತಂದೆಯ ದೇಹವನ್ನು ಉಪ್ಪಿನಿಂದ ಮುಚ್ಚಿಟ್ಟರು. ಈ ಸಮಯದಲ್ಲಿ, ಯಾಕಿಂಗೆ ಮಾಡ್ತಿದ್ದೀರಾ ಎಂದು ನಾನು ಕೇಳಿದೆ. ಅದಕ್ಕೆ ಅವರು, ನಿಮ್ಮಪ್ಪ ಮೃತಪಟ್ಟಿದ್ದಾರೆ ಎಂದರು ಎಂದಿದ್ದಾನೆ.

ಸಂತ್ರಸ್ತ ಉತ್ತರ ಪ್ರದೇಶದ ನಿವಾಸಿಯಾಗಿದ್ದು, ಒಂದೂವರೆ ತಿಂಗಳ ಹಿಂದೆ ಮನೆ ಬಾಡಿಗೆಗೆ ಪಡೆದಿದ್ದು, ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ವಾಸಿಸುತ್ತಿದ್ದ. ಆರೋಪಿ ಮಹಿಳೆ ತಾನು ಬಾಡಿಗೆ ಮನೆಯಲ್ಲಿದ್ದ ಮಾಲೀಕರ ಮಗನನ್ನೇ ಪ್ರೀತಿಸಿದ್ದು, ಆತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯ ತಂಡವು ಘಟನಾ ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿ, ತನಿಖಾ ತಂಡಕ್ಕೆ ಹಸ್ತಾಂತರಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net