

ವಾಷಿಂಗ್ಟನ್: ಪ್ರೇಮಿಗಳ ದಿನಕ್ಕೆ ಪ್ರಿಯತಮೆ/ಪ್ರಿಯಕರನನ್ನು ಡೇಟ್ಗೆ ಕರೆದುಕೊಂಡು ಹೋಗುವುದು ಮಾಮೂಲು. ಆದರೆ ಇಲ್ಲೊಬ್ಬ ಪಾಗಲ್ ಪ್ರೇಮಿ ಮಾಜಿ ಪ್ರಿಯತಮೆಗೆ ಮಾಡಿದ ಕೆಲಸವನ್ನು ಕೇಳಿದರೆ ನೀವೂ ಹೌಹಾರುತ್ತೀರ.
ಅಮೆರಿಕದ ಅರೊಜೋನಾದ 20 ವರ್ಷದ ಯೆಶಾಯ ಕಸ್ಪರ್ಡ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನಂತೆ. ಆದರೆ ಯಾವುದೋ ಕಾರಣಕ್ಕೆ ಅವರಿಬ್ಬರ ಪ್ರೀತಿ ಮುರಿದುಬಿದ್ದಿತ್ತು. ಅದಾದ ನಂತರ ಕಳೆದ ತಿಂಗಳು ಯೆಶಾಯ ಕಸ್ಪರ್ಡ್ ಯುವತಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವಿಚಾರವಾಗಿ ಪೊಲೀಸ್ ದೂರು ದಾಖಲಾಗಿದ್ದು, ಆತ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾನೆ. ಆದರೆ ಅಲ್ಲಿಂದ ಹೇಗೋ ಪಾರಾಗಿ ಹೊರಗೆ ಬಂದ ಆತ ಮತ್ತೆ ಮಾಡಬಾರದ ಕೆಲಸ ಮಾಡಿದ್ದಾನೆ.
ಪ್ರೇಮಿಗಳ ವಾರದ ಪ್ರಯುಕ್ತ ಆತ ಯುವತಿಯ ಮನೆಗೆ ಹೋಗಿದ್ದಾನೆ. ನನ್ನ ಜತೆ ಡೇಟ್ಗೆ ಬಾ ಎಂದು ಕರೆದಿದ್ದಾನೆ. ಆದರೆ ಆಕೆ ಅದಕ್ಕೆ ಒಪ್ಪಿಲ್ಲ. ಸಿಟ್ಟಿನಿಂದ ಯುವತಿಯ ಮೇಲೆ ಹಲ್ಲೆ ಮಾಡಿ, ಆಕೆಯನ್ನು ಎಳೆದುಕೊಂಡು ಬಂದು ಕಾರಿನಲ್ಲಿ ಕೂರಿಸಿಕೊಂಡಿದ್ದಾನೆ. ಕಾರನ್ನು ಬರೋಬ್ಬರಿ ಗಂಟೆಗೆ 100 ಮೈಲು ವೇಗದಲ್ಲಿ ಓಡಿಸಿಕೊಂಡು ಹೋಗಿದ್ದಾನೆ. ಅದಾದ ನಂತರ ಮತ್ತೊಮ್ಮೆ ಯುವತಿಯ ತಾಯಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಇದೀಗ ಆತನನ್ನು ಹುಡುಕಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. (ಏಜೆನ್ಸೀಸ್)