

ಪಂಜಾಬ್: ಈತನಿಗೆ ಲಾಟರಿ ಖರೀದಿಸುವ ವ್ಯಸನ ಅಂಟಿಕೊಂಡಿದ್ದು, ನಿನ್ನೆ ಮೊನ್ನೆಯಿಂದಲ್ಲ. ಬರೋಬ್ಬರಿ 34 ವರ್ಷಗಳಿಂದಲೂ ಈತ ಲಾಟರಿ ಖರೀದಿಸುತ್ತಲೇ ಇದ್ದ. ಒಂದಲ್ಲ ಒಂದು ದಿನ ಬಂಪರ್ ಪ್ರೈಸ್ ಬರುತ್ತೆ ಎಂಬ ವಿಶ್ವಾಸದಿಂದಲೇ ನಿರಂತರವಾಗಿ ಲಾಟರಿ ಖರೀದಿಸುತ್ತಿದ್ದ ಈತನಿಗೆ ಕೊನೆಗೂ ಕೋಟ್ಯಂತರ ರೂಪಾಯಿ ಬಹುಮಾನ ಬಂದಿದೆ.
ಪಂಜಾಬ್ ಬತಿಂಡ ಜಿಲ್ಲೆಯ ರೋಷನ್ ಸಿಂಗ್ ಕೊನೆಗೂ ಲಾಟರಿಯಲ್ಲಿ ಬಂಪರ್ ಪ್ರೈಸ್ ಗೆದ್ದಿದ್ದು, ಪಂಜಾಬ್ ರಾಜ್ಯದ ಡಿಯರ್ ಬೈಸಾಖಿ ಬಂಪರ್ ಲಾಟರಿ 2022ರಲ್ಲಿ ಈತನಿಗೆ 2.5 ಕೋಟಿ ರೂ. ಬಂಪರ್ ಬಹುಮಾನ ಬಂದಿದೆ.
1987ರಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ್ದ ರೋಷನ್, ಬಳಿಕ ಹಲವರ ಬಳಿ ಕೆಲಸ ಮಾಡಿ ಸ್ವಂತ ಬಟ್ಟೆ ಅಂಗಡಿ ಇರಿಸಿಕೊಂಡಿದ್ದ. 1988ರಿಂದಲೂ ಲಾಟರಿ ಖರೀದಿಸುತ್ತಲೇ ಇರುವ ರೋಷನ್ಗೆ ಆಗಾಗ 100-200 ರೂ. ಬಹುಮಾನ ಬಂದಿದ್ದು ಬಿಟ್ಟರೆ ಹೆಚ್ಚಿಗೆ ಬಂದಿರಲಿಲ್ಲ. ಅದಾಗ್ಯೂ ಒಂದಲ್ಲ ಒಂದು ದಿನ ಬಂಪರ್ ಬರುತ್ತೆ, ಕಳೆದುಕೊಂಡಿದ್ದ ಹಣವೆಲ್ಲ ವಾಪಸ್ ಸಿಗುತ್ತೆ ಅಂತ ಈತ ಲಾಟರಿ ಖರೀದಿ ಮುಂದುವರಿಸಿದ್ದ.
18 ವರ್ಷಗಳಿಂದ ಬಟ್ಟೆ ಅಂಗಡಿಯ ಮಾಲೀಕನಾಗಿ ದುಡಿಯುತ್ತಿದ್ದರೂ ಮನಸಿಗೆ ಬಂದಷ್ಟು ಖರ್ಚು ಮಾಡುವಷ್ಟು ಸಂಪಾದನೆ ಇಲ್ಲ ಎಂಬ ಕೊರಗು ರೋಷನ್ಗಿತ್ತು. ಪತಿಯ ಲಾಟರಿ ಗೀಳು ತಪ್ಪಿಸಲು ಪತ್ನಿ ಸಾಕಷ್ಟು ಪ್ರಯತ್ನ ಮಾಡಿದರೂ ಫಲ ಕೊಟ್ಟಿರಲಿಲ್ಲ.
ಆದರೆ ಇತ್ತೀಚೆಗೆ ರಾಂಪುರ ಫುಲ್ ಲಾಟರಿ ಸೆಂಟರ್ನಿಂದ ರೋಷನ್ಗೆ ಕರೆ ಬಂದಿದ್ದು, 2.5 ಕೋಟಿ ರೂ. ಬಹುಮಾನ ಬಂದಿರುವ ವಿಷಯ ತಿಳಿಯುತ್ತದೆ. ಒಂದಲ್ಲ ಒಂದು ದಿನ ದೊಡ್ಡ ಮೊತ್ತ ಬರುತ್ತೆ, ಕನಿಷ್ಠ 10 ಲಕ್ಷ ರೂ. ಬರುತ್ತೆ ಅಂದುಕೊಂಡಿದ್ದೆ. ಆದರೆ ದೇವರ ದಯೆಯಿಂದ ಬಂಪರ್ ಬಹುಮಾನ ಬಂದಿವೆ. ಎಲ್ಲ ತೆರಿಗೆ ಕಳೆದು 1.75 ಕೋಟಿ ರೂ. ಸಿಕ್ಕಿದೆ, ಈ ಹಣ ತನ್ನ ಮೂವರು ಮಕ್ಕಳ ಭವಿಷ್ಯಕ್ಕೆ ಬಳಸುವುದಾಗಿ ರೋಷನ್ ಹೇಳಿದ್ದಾನೆ.