

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ವಿಡಿಯೋಗಳು, ಫೋಟೋಗಳು ನಮ್ಮಲ್ಲಿ ನಗು ಮೂಡಿಸುವುದಂತೂ ಸುಳ್ಳಲ್ಲ. ಅದೆಷ್ಟೆಷ್ಟೋ ವಿಲಕ್ಷಣ ಘಟನೆಗಳು, ಮನುಷ್ಯರನ್ನು ಈ ಸೋಷಿಯಲ್ ಮಿಡಿಯಾಗಳು ತೆರೆದಿಡುತ್ತವೆ.
ಈಗ ಯುಕೆಯ ಬಾತ್ನಲ್ಲಿರುವ ರಾಯಲ್ ವಿಕ್ಟೋರಿಯಾ ಪಾರ್ಕ್ನಲ್ಲಿ ಸೆರೆ ಹಿಡಿಯಲಾದ ವಿಡಿಯೋ ನಿಮ್ಮನ್ನು ನಗಿಸದಿದ್ದರೆ ಕೇಳಿ...!
ವ್ಯಕ್ತಿಯೋರ್ವ ಒಬ್ಬನೇ ಪಾರ್ಕ್ಗೆ ಬಂದಿದ್ದಾನೆ. ಹೀಗೆ ಬಂದವನು ಪಾರ್ಕ್ನ ಕಲ್ಲುಬೆಂಚ್ಗಳ ಮೇಲೆ ಕೂರಲಿಲ್ಲ...ಹುಲ್ಲಿನ ನೆಲದ ಮೇಲೆ ಕುಳಿತುಕೊಳ್ಳಲಿಲ್ಲ. ಬದಲಿಗೆ ಬರೋಬ್ಬರಿ 60 ಅಡಿ ಎತ್ತರ ಮರ ಹತ್ತಿ, ಅದರ ತುತ್ತತುದಿಯಲ್ಲಿ ಬಿಂದಾಸ್ ಆಗಿ ಕುಳಿತುಕೊಂಡಿದ್ದಾನೆ. ಅವನು ಮರ ಹತ್ತಿ ಕುಳಿತು ಸ್ಯಾಂಡ್ ವಿಚ್ನಂತಹ ತಿಂಡಿ ತಿನ್ನುತ್ತಿರುವುದನ್ನು ಅದೇ ಪಾರ್ಕ್ನಲ್ಲಿದ್ದ ಯುವಕರ ಗುಂಪು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದೆ.
ಆ ವ್ಯಕ್ತಿ ಅಷ್ಟು ಎತ್ತರಕ್ಕೆ ಹೇಗೇ ಹೋದ. ಅವನ ಬಳಿ ಬೈನಾಕ್ಯುಲರ್ ಇದ್ದಂತೆ ತೋರುತ್ತಿದೆ. ಕೊವಿಡ್-19 ಇರುವುದರಿಂದ ಸೋಷಿಯಲ್ ಡಿಸ್ಟನ್ಸ್ ಸಾಮಾನ್ಯ. ಆದರೆ ಈ ಪರಿಯ ಅಂತರ ಕಾಯ್ದುಕೊಳ್ಳುವುದಾ? ಎಂದು ವಿಡಿಯೋ ಪೋಸ್ಟ್ ಮಾಡಿದವನು ಹೇಳಿದ್ದಾನೆ.
ವಿಡಿಯೋ ನೋಡಿದವರಂತೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಗು ತಡೆಯಲು ಸಾಧ್ಯವೇ ಆಗುತ್ತಿಲ್ಲ ಎಂದು ಹೇಳಿದ್ದಾರೆ. ಇಡೀ ಪಾರ್ಕ್ ಕಣ್ತುಂಬಿಕೊಳ್ಳಲು ಮರ ಏರಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)