ಕ್ರೌರ್ಯ ಮೆರೆಯುತ್ತಿದ್ದವನನ್ನು ಸಾರ್ವಜನಿಕರೇ ಹಿಡಿದು ಬಾರಿಸಿದ್ರು; ಕೊಲೆಗೆ ಯತ್ನಿಸಿದವನನ್ನು ಪೊಲೀಸರಿಗೆ ಒಪ್ಪಿಸಿದ್ರು

crime
Published on

ಮಂಡ್ಯ: ಸಾಮಾನ್ಯವಾಗಿ ಸಮಾಜದಲ್ಲಿ ಅಪರಾಧ ನಡೆಯುತ್ತಿದ್ದರೆ ಜನರು ಮಧ್ಯಪ್ರವೇಶಿಸಲು ಹಿಂಜರಿಯುವುದು ಸಹಜ. ಆದರೆ ಇಲ್ಲೊಂದು ಕಡೆ ವ್ಯಕ್ತಿಯೊಬ್ಬ ಕ್ರೌರ್ಯ ಮೆರೆಯುತ್ತ ಕೊಲೆಗೆ ಯತ್ನಿಸುತ್ತಿದ್ದರೂ ಜನರೆಲ್ಲ ಆತನನ್ನು ಹಿಡಿದು ಬಾರಿಸಿ ಕೊನೆಗೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕು ಕಚೇರಿ ಬಳಿ ಇಂದು ಈ ಘಟನೆ ನಡೆದಿದೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಮರಳಿ ಗ್ರಾಮದ ನಂದನ್ ಎಂಬಾತ ಅದೇ ಗ್ರಾಮದ ಚನ್ನರಾಜು (45) ಎಂಬಾತನ ಮೇಲೆ ಕುಡುಗೋಲಿನಿಂದ ಹಲ್ಲೆ ಮಾಡಿದ್ದಾನೆ. ತಾಲೂಕು ಕಚೇರಿಯ ಮೊದಲ ಮಹಡಿಯಲ್ಲಿ ಜಗಳ ತೆಗೆದು ಹಲ್ಲೆಗೆ ಮುಂದಾದ ನಂದನ್, ಚನ್ನರಾಜು ಹೊರಗೆ ಓಡಿಹೋದರೂ ಬಿಡದೆ ಹಲ್ಲೆ ಮುಂದುವರಿಸಿದ್ದಾನೆ.

ಈ ಸಂದರ್ಭದಲ್ಲಿ ಆರಂಭದಲ್ಲಿ ಹೆದರಿದ್ದ ಸಾರ್ವಜನಿಕರು ಕೊನೆಗೆ ಕೊಲೆಗೆ ಯತ್ನಿಸಿದವನನ್ನು ಹಿಡಿದು ಬಾರಿಸಿದ್ದಾರೆ. ಮೊದಲ ಮಹಡಿಯಿಂದ ಕುಡುಗೋಲಿನಲ್ಲೇ ಹೊಡೆದುಕೊಂಡು ಬಂದಿದ್ದ ನಂದನ್, ನಂತರ ಆವರಣದಲ್ಲೂ ಮನಸೋ ಇಚ್ಛೆ ಕ್ರೌರ್ಯ ನಡೆಸಿದ್ದಾನೆ. ಸಾರ್ವಜನಿಕರು ಕಿರುಚುತ್ತಿದ್ದರೂ ಲೆಕ್ಕಿಸಲಿಲ್ಲ. ಆಗ ವಕೀಲರೊಬ್ಬರು ಕಲ್ಲಿನಿಂದ ಹೊಡೆದ ಬಳಿಕ ಸ್ವಲ್ಪ ದೂರ ಹೋಗಿದ್ದ ನಂದನ್​ನನ್ನು ಸಾರ್ವಜನಿಕರೆಲ್ಲ ಒಟ್ಟಾಗಿ ಹಿಡಿದು ಬಾರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net