

ಚಂಡೀಗಢ: ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ 22 ವರ್ಷದ ಯುವಕನೊಬ್ಬನ ಹೃದಯಕ್ಕೆ ಇರಿದಿರುವ ಘಟನೆ ಪಂಜಾಬ್ನ ಪಟಿಯಾಲಾದಲ್ಲಿ ಬೆಳಕಿಗೆ ಬಂದಿದೆ. ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ಯುವಕನ ಮೇಲೆ ಹಲ್ಲೆ ನಡೆಸಿದ ಬಳಿಕ ಹೃದಯಕ್ಕೆ ಇರಿದಿದ್ದಾರೆ. ಸಂತ್ರಸ್ತ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಅತಿಯಾಗಿ ರಕ್ತ ಸೋರಿಕೆ ಆಗಿದ್ದರಿಂದ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ:
ಮೃತ ದುರ್ದೈವಿಯನ್ನು ಕರಣ್ ಎಂದು ಗುರುತಿಸಲಾಗಿದೆ. ಕೃತ್ಯದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ವಿಡಿಯೋದಲ್ಲಿ ಬೈಕ್ನಲ್ಲಿ ಬರುವ ಮೂವರು ವ್ಯಕ್ತಿಗಳು ಕರಣ್ನನ್ನು ನೆಲಕ್ಕೆ ಬೀಳಿಸುತ್ತಾರೆ. ಕರಣ್ ಎದ್ದು ಹೋಗಲು ಪ್ರಯತ್ನಿಸುತ್ತಾನೆ ಎದುರಿನಿಂದ ಬರುವ ತಮ್ಮ ಸಹಚರರ ಬೈಕ್ಗೆ ತಳ್ಳುತ್ತಾರೆ. ಬಳಿಕ ಆತನ ಎದೆಗೆ ಕಾಲಿನಿಂದ ಒದ್ದು ಆತನ ಮೇಲೆ ಹಲ್ಲೆ ಮಾಡಿರುವುದನ್ನು ಕಾಣಬಹುದಾಗಿದೆ.
ಕರಣ್ ಅಬ್ಲೋವಲ್ ಪ್ರದೇಶದಲ್ಲಿರುವ ತನ್ನ ಮನೆಗೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ದ್ವಿಚಕ್ರದಲ್ಲಿ ಬಂದ ವ್ಯಕ್ತಿಗಳು ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹತ್ಯೆ ಮಾಡಿದವರಲ್ಲಿ ಮೂವರನ್ನು ಅಂಶ್, ಅಮನ್ಮೀತ್ ಮತ್ತು ಯುವರಾಜ್ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದರು. ವೈಯಕ್ತಿಕ ದ್ವೇಷವೇ ಈ ದಾಳಿಗೆ ಕಾರಣ ಎಂದು ಪ್ರಾಥಮಿಕ ಸಾಕ್ಷ್ಯಗಳು ತಿಳಿಸಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.(ಏಜೆನ್ಸೀಸ್)