ಮನೆಯ ಒಳಗೆ ಪಾಕ್​ ಪರ ಬರಹ! ದೆಹಲಿ ಪೊಲೀಸರ ಬಲೆಗೆ ಬಿದ್ದ ವ್ಯಕ್ತಿಯ ಹಿನ್ನೆಲೆ ಹೀಗಿದೆ…

Pakistan Pro Writing
Published on

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಪೊಲೀಸರು ರೋಹಿಣಿ ಪ್ರದೇಶದಲ್ಲಿ ಪಾಕಿಸ್ತಾನ ಪರ ಪೋಸ್ಟರ್ ಹಾಕಿದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೋದಲ್ಲಿ ಆರೋಪಿಯ ಫ್ಲಾಟ್‌ನಲ್ಲಿ ವಿವಾದಾತ್ಮಕ ಪೋಸ್ಟರ್ ಇರುವುದು ಬೆಳಕಿಗೆ ಬಂದಾಗ ಸ್ಥಳೀಯರ ದೂರಿನ ಆಧಾರದ ಮೇಲೆ ಆತನನ್ನು ಬಂಧಿಸಲಾಗಿದೆ.

ಪೋಸ್ಟರ್‌ ವಿಚಾರಕ್ಕೆ ಸಂಬಂಧಿಸಿದಂತೆ ನೆರೆಹೊರೆಯವರು ದೂರು ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಪೋಸ್ಟರ್​ನಲ್ಲಿನ ಬರಹ ಆಕ್ಷೇಪಾರ್ಹವಾಗಿದೆ. ಪಾಕಿಸ್ತಾನ ಚಿರಾಯು ಎಂದು ಇಂಗ್ಲಿಷ್​ನಲ್ಲಿ ಬರೆಯಲಾಗಿದೆ. ಬಂಧಿತ ಆರೋಪಿಯ ಮಾನಸಿಕ ಆರೋಗ್ಯ ಸರಿಯಿಲ್ಲ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ಬಂಧಿತ ವ್ಯಕ್ತಿಗೆ ಪಾಕಿಸ್ತಾನದೊಂದಿಗೆ ಯಾವುದಾದರೂ ಸಂಪರ್ಕವಿದೆಯೇ ಎಂಬ ಆಯಾಮದಲ್ಲಿ ಪೊಲೀಸರು ಪ್ರಸ್ತುತ ತನಿಖೆ ನಡೆಸುತ್ತಿದ್ದಾರೆ. ತನಿಖೆಯ ಭಾಗವಾಗಿ ಆರೋಪಿಯ ಸಂಬಂಧಿಕರನ್ನೂ ಸಹ ವಿಚಾರಣೆ ನಡೆಸಿದ್ದಾರೆ. ಅಲ್ಲದೆ, ಆರೋಪಿ ನಿವಾಸದಲ್ಲಿದ್ದ ಪೋಸ್ಟರ್ ಮತ್ತು ಅದಕ್ಕೆ ಸಂಬಂಧಿಸಿದ ಬ್ಯಾನರ್‌ಗಳನ್ನು ಅಧಿಕಾರಿಗಳು ಸದ್ಯ ವಶಕ್ಕೆ ಪಡೆದಿದ್ದಾರೆ.

ರೋಹಿಣಿಯ ಆವಂತಿಕಾ ಸಿ-ಬ್ಲಾಕ್ ಪ್ರದೇಶದಲ್ಲಿ ತಂಗಿದ್ದ ವ್ಯಕ್ತಿಯೊಬ್ಬ ತನ್ನ ಫ್ಲಾಟ್‌ನ ಗೋಡೆಯ ಮೇಲೆ ಪಾಕಿಸ್ತಾನವನ್ನು ಬೆಂಬಲಿಸುವ ಕೆಲವು ಘೋಷಣೆಗಳನ್ನು ಬರೆದಿದ್ದಾನೆ ಎಂದು ಸ್ಥಳೀಯರಿಂದ ನಮಗೆ ಮಾಹಿತಿ ಸಿಕ್ಕಿತು. ಪ್ರಾಥಮಿಕ ತನಿಖೆಯ ಪ್ರಕಾರ ಆ ವ್ಯಕ್ತಿ ಮಾನಸಿಕವಾಗಿ ಸ್ಥಿರವಾಗಿಲ್ಲ ಮತ್ತು ಫ್ಲಾಟ್‌ನಲ್ಲಿ ಏಕಾಂಗಿಯಾಗಿ ಉಳಿದಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ತನ್ನ ವರದಿಯಲ್ಲಿ ತಿಳಿಸಿದೆ.

ಈ ಘಟನೆಯು ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆಯೇ ಹೊರಹೊಮ್ಮಿದೆ. ಅದರಲ್ಲೂ ವಿಶೇಷವಾಗಿ ಭಾರತೀಯ ಸೈನಿಕರ ಮೇಲೆ ಇತ್ತೀಚಿನ ದಾಳಿಯ ನಂತರ ಇದು ಹೊರಬಂದಿದೆ. ಕೆಲವು ದಿನಗಳ ಹಿಂದೆ, ಕಾರ್ಗಿಲ್ ವಿಜಯೋತ್ಸವದಂದು ಪಾಕಿಸ್ತಾನದ ಕಮಾಂಡೋಗಳು ಮತ್ತು ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಭಾರತೀಯ ಯೋಧರು ಹುತಾತ್ಮರಾದರು. ಕುಪ್ವಾರ ಜಿಲ್ಲೆಯ ಮಚಿಲ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ದಾಳಿ ನಡೆದಿದ್ದು, ಮೇಜರ್ ಸೇರಿದಂತೆ ನಾಲ್ವರು ಯೋಧರು ಗಾಯಗೊಂಡಿದ್ದಾರೆ. ಎನ್‌ಕೌಂಟರ್ ಸಮಯದಲ್ಲಿ ಭಾರತೀಯ ಪಡೆಗಳು ಒಬ್ಬ ಪಾಕಿಸ್ತಾನಿ ನುಸುಳುಕೋರನನ್ನು ಯಶಸ್ವಿಯಾಗಿ ಕೊಂದು ಅವನ ರೈಫಲ್ ಮತ್ತು ಕಠಾರಿಗಳನ್ನು ವಶಪಡಿಸಿಕೊಂಡವು. ಇಬ್ಬರು ಉಗ್ರರು ಪಾಕ್ ಆಡಳಿತದ ಕಾಶ್ಮೀರಕ್ಕೆ ಪರಾರಿಯಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net