Vidyaganesha Review; ವಿದ್ಯೆ, ವಿದ್ಯಾಗಾಗಿ ಗಣೇಶನ ಹೋರಾಟ

SDV
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ಉತ್ತರ ಕರ್ನಾಟಕದ ಜನಜೀವನ, ಭಾಷೆ, ಸಂಸತಿ, ಆಚಾರ&ವಿಚಾರಗಳ ಬಗ್ಗೆ ಸಿನಿಮಾಗಳು ಬಂದಿದ್ದರೂ, ಕಮರ್ಷಿಯಲ್ಲಾಗಿ ಹೆಚ್ಚು ಸದ್ದು ಮಾಡಿಲ್ಲ. ಆ ನಿಟ್ಟಿನಲ್ಲಿ ಉಮೇಶ್​ಚಂದ್ರ ನಿರ್ದೇಶನದ "ವಿದ್ಯಾಗಣೇಶ' ಒಂದು ವಿನೂತನ ಪ್ರಯತ್ನ. ಪ್ರೀತಿ, ಗೆಳೆತನ, ಶಿಕ್ಷಣದ ಮಹತ್ವ, ಸೇಡು, ತಾಯಿ-ಮಗನ, ತಂದೆ-ಮಗಳ ಬಾಂಧವ್ಯ, ಆ್ಯಕ್ಷನ್​, ಕಾಮಿಡಿ... ಹೀಗೆ ಕಮರ್ಷಿಯಲ್​ ಅಂಶಗಳಿರುವ ಜವಾರಿ ಸೊಗಡಿನ ಚಿತ್ರವಿದು.

ಆತ ಬಸವೇಶ್ವರ ಟೆಂಟ್​ಹೌಸ್​ ಮಾಲೀಕ ಗಣೇಶ (ಮಲ್ಲು ಜಮಖಂಡಿ). ಆತನಿಗೆ ಅಪ್ಪನಿಲ್ಲ, ಅಮ್ಮನೇ ಎಲ್ಲ. ಈಕೆ ವಿದ್ಯಾ (ಸುಲಾ). ನಿವೃತ್ತ ಶಿಕ್ಷಕ ಶಿವಣ್ಣ ಮೇಷ್ಟ್ರು (ರಮೇಶ್​ ಭಟ್​) ಏಕೈಕ ಪುತ್ರಿ. ಈಕೆಗೆ ತಾಯಿಯಿಲ್ಲ, ತಂದೆಯೇ ಎಲ್ಲ. ವಿದ್ಯಾಗೆ, ಗಣೇಶನ ಮೇಲೆ ಪ್ರೇಮಾಂಕುರವಾಗುತ್ತದೆ. ಅಪ್ಪನಂತೆ ತಾನೂ ಶಿಕ್ಷಕಿಯಾಗಬೇಕು ಅಂತ ಕನಸು ಕಾಣುವ ಆಕೆ, ತನ್ನೂರಿನ ಸುತ್ತಮುತ್ತಲಿನ ಸರ್ಕಾರಿ ಶಾಲೆಗಳಲ್ಲಿನ ಅವ್ಯವಸ್ಥೆ ವಿರುದ್ಧ ಧ್ವನಿ ಎತ್ತುತ್ತಾಳೆ. ಆದರೆ, ಗ್ರಾಮ ಪಂಚಾಯ್ತಿ ಅಧ್ಯಕ್ಷನೇ (ಸುಚೇಂದ್ರ ಪ್ರಸಾದ್​) ಸರ್ಕಾರಿ ಶಾಲೆಗಳನ್ನು ಅವನತಿಗೆ ತಳ್ಳಿ, ಅವಗಳಿಗೆ ಸಿಗುವ ಅನುದಾನವನ್ನು ಪಡೆದು, ತನ್ನ ಒಡೆತನದ ಖಾಸಗಿ ಶಾಲೆಯಲ್ಲೂ ಸಾವಿರಾರು ರೂಪಾಯಿ ಡೊನೇಷನ್​ ಪಡೆದು, ಹಣ ಮಾಡುತ್ತಿರುತ್ತಾನೆ. ವಿದ್ಯೆಗಾಗಿ ಹೋರಾಟದ ನಡುವೆಯೇ ವಿದ್ಯಾ, ಗಣೇಶನ ಜತೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾಳೆ. ಮುಂದೆ ಆಕೆಯ ಹೋರಾಟ ಏನಾಗುತ್ತದೆ? ಇಬ್ಬರೂ ಮದುವೆಯಾಗುತ್ತಾರಾ? ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಕ್ರಾಂತಿಗೆ ನಾಂದಿ ಹಾಡುತ್ತಾರಾ? ತಿಳಿಯಲು ಸಿನಿಮಾ ನೋಡಿ. ಜವಾರಿ ಭಾಷೆಯಲ್ಲೇ ಇರುವ "ವಿದ್ಯಾಗಣೇಶ'ದಲ್ಲಿ ಉತ್ತರ ಕರ್ನಾಟಕದ ಸಂಸತಿ, ವೀರಗಾಸೆ, ಭಜನಾ ಸ್ಪರ್ಧೆಗಳು, ಜಾತ್ರೆ, ಮದುವೆ, ತಿಥಿ... ಹೀಗೆ ಹಲವು ಆಚರಣೆಗಳಿವೆ. ಮಲ್ಲು ಜಮಖಂಡಿ ಮತ್ತವರ ಗೆಳೆಯರು ಅಲ್ಲಲ್ಲಿ ಕಾಮಿಡಿ ಕಚಗುಳಿ ಇಡುತ್ತಾರೆ. ಸುಚೇಂದ್ರ ಪ್ರಸಾದ್​, ಸುಲಾ, ಸುಧೀ ಸೇರಿ ಎಲ್ಲ ಪಾತ್ರಗಳೂ ಅಚ್ಚುಕಟ್ಟಾಗಿ ಮೂಡಿಬಂದಿವೆ. ಎಲ್ಲೂ ಬೋರ್​ ಆಗದಂತೆ ನೋಡಿಸಿಕೊಂಡು ಹೋಗುವ, ಉತ್ತಮ ಸಂದೇಶದ ಜತೆಗೆ ಮನರಂಜನೆಯೂ ಹೇರಳವಾಗಿರುವ ಸಿನಿಮಾ "ವಿದ್ಯಾಗಣೇಶ'.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net