70 ವರ್ಷದಲ್ಲಿ ಏನು ಮಾಡಿದ್ರಿ ಎಂದು ಮೋದಿ ಕೇಳ್ತಾರೆ; ನಾವು ಏನು ಮಾಡದೆ ಹೊಗಿದ್ರೆ ದೇಶ ಉಳಿಯುತ್ತಿರಲಿಲ್ಲ

Kharge
Published on

ಬೆಂಗಳೂರು: ಎಐಸಿಸಿ ಅದ್ಯಕ್ಷರಾದ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್ ನಾಯಕರು ಸ್ವಾಗತಿಸಿದರು. ಬಳಿಕೆ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಸರ್ವೋದಯ ಸಮಾವೇಷದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಖರ್ಗೆ, ಮೋದಿ-ಅಮಿತ್ ಷಾ ವಿರುದ್ಧ ವಾಗ್ದಾಳಿ ನಡೆಸಿದರು.

ಮಲ್ಲಿಕಾರ್ಜುನ ಖರ್ಗೆ ಮಾತನಾಡುತ್ತಾ, ತತ್ವ ಸಿದ್ಧಾಂತಗಳಿಗೆ ಬದ್ದರಾಗಿ ಕೆಲಸ ಮಾಡಬೇಕು. ಹಣದ ಆಸೆಗಾಗಿ ಯಾವತ್ತೂ ಕೆಲಸ ಮಾಡಬಾರದು. ಪಕ್ಷ ಸಿದ್ಧಾಂತ ನಂಬಿದವರು ಎಂದಿಗೂ ಪಕ್ಷ ಬಿಡುವ ಕೆಲಸಕ್ಕೆ ಮುಂದಾಗುವುದಿಲ್ಲ ಎಂದು ಹೇಳಿದರು.

ಮೋದಿ ಭಾಷಣಗಳಲ್ಲಿ ಮಾತನಾಡುತ್ತಾ, 70 ವರ್ಷದ ಆಡಳಿತದಲ್ಲಿ ಏನು ಮಾಡಿದ್ರಿ ಎಂದು ಕೇಳುತ್ತಾರೆ. ಕಾಂಗ್ರೆಸ್ ಈ ದೇಶಕ್ಕೆ ಬುನಾದಿ ಹಾಕಿ ಕೊಡುವ ಕೆಲಸ ಮಾಡಿದೆ. ಒಂದು ವೇಳೆ ನಾವು ಏನೂ ಮಾಡದೇ ಹೋಗಿದ್ದರೆ ದೇಶ ಉಳಿಯುತ್ತಿರಲಿಲ್ಲ.

ಅಂಬೇಡ್ಕರ್ ಸಂವಿಧಾನ ಉಳಿದರೆ ದೇಶ ಉಳಿಯುತ್ತದೆ. ಸಂವಿಧಾನದ ಕಾರಣದಿಂದ ಮೋದಿ, ಅಮಿತ್ ಷಾ ಮಾತನಾಡುತ್ತಿದ್ದಾರೆ. ದೇಶದಲ್ಲಿ ಕೆಟ್ಟ ಸರ್ಕಾರ ಆಡಳಿತದಲ್ಲಿದೆ. ಜನರೆಲ್ಲಾ ಒಗ್ಗೂಡಿ ಹೋರಾಟ ಮಾಡಬೇಕಿದೆ. ಆಗ ಮಾತ್ರ ಕೆಟ್ಟ ಸರ್ಕಾರವನ್ನು ಕಿತ್ತೊಗೆಯಲು ಸಾಧ್ಯ ಎಂದು ಬಿಜೆಪಿ ಸರ್ಕಾರದ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ಹೊರ ಹಾಕಿದರು.

ಕಾಂಗ್ರೆಸ್ ಮಾಡಿದ ಶಾಲೆಯಲ್ಲಿ ಕಲಿತು ಮೋದಿ, ಅಮಿತ್ ಷಾ ಮಾತನಾಡುತ್ತಿದ್ದಾರೆ. ಇಂದಿರಾಗಾಂಧಿ ಹೋರಾಟ ಮಾಡದೇ ಹೋಗಿದ್ದರೆ ಬಾಂಗ್ಲಾದೇಶ ಇರುತ್ತಿರಲಿಲ್ಲ. ವಿದೇಶಾಂಗ ನೀತಿಯನ್ನು ನೆಹರು ಮಾಡಿದರು. ಕಾರಣವಿಲ್ಲದೆ ಪದೇ ಪದೇ ನೆಹರು, ಇಂದಿರಾಗಾಂಧಿ, ಸೋನಿಯಾಗಾಂಧಿ ಅವರನ್ನು ಬೈಯ್ಯುವುದು ಬಿಡಿ ಎಂದು ಹೇಳಿದರು.

ಕೇಂದ್ರ ಗೃಹ ಸಚಿವ ಅಮಿತ್ ಷಾ ವಿರುದ್ಧ ಆಕ್ರೋಶ ಹೊರ ಹಾಕಿದ ಖರ್ಗೆ, ನಮ್ಮ ಪಕ್ಷಕ್ಕೆ ಅವ್ವ-ಮಕ್ಕಳ ಪಕ್ಷ ಎಂದು ಅಮಿತ್ ಷಾ ಕರೆಯುತ್ತಾರೆ. ಅಧ್ಯಕ್ಷ ಸ್ಥಾನಕ್ಕೆ ಗಾಂಧಿ ಕುಟಂಬದಿಂದ ಯಾರೂ ಸ್ಪರ್ಧೆ ಮಾಡಿಲ್ಲ. ಆದರೂ ಅಮಿತ್ ಷಾ ಮಾತ್ರ ಮಾತನಾಡುವುದು ಬಿಟ್ಟಿಲ್ಲ. ನಮ್ಮ ಪಕ್ಷದ ಚಿಂತೆ ಅಮಿತ್ ಷಾಗೆ ಯಾಕೆ ಎಂದು ಖರ್ಗೆ ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net