

malegaon-blast: 2008 ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಇತ್ತೀಚೆಗೆ ಖುಲಾಸೆಗೊಂಡ ಆರೋಪಿಗಳಲ್ಲಿ ಒಬ್ಬರಾದ ಮಾಜಿ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ಅವರು ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಇತರರ ಹೆಸರನ್ನು ಈ ಘಟನೆಯಲ್ಲಿ ಹೆಸರಿಸುವಂತೆ ತನಿಖಾಧಿಕಾರಿಗಳು ತಮ್ಮ ಮೇಲೆ ಒತ್ತಡ ಹೇರಿದರು ಎಂದು ಆರೋಪಿಸಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಸುಮಾರು ಒಂಬತ್ತು ವರ್ಷಗಳ ಕಾಲ ಜೈಲಿನಲ್ಲಿ ಕಳೆದಿದ್ದರೂ, ಆಗಿನ ಕಾಂಗ್ರೆಸ್ ನೇತೃತ್ವದ ಸರ್ಕಾರವು ತನ್ನನ್ನು ತಪ್ಪಾಗಿ ಆರೋಪಿಸಿ, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿತು. ಆದರೆ, ತನಿಖೆಯ ಸಮಯದಲ್ಲಿ ತಾನು ಯಾರ ಹೆಸರನ್ನೂ ಹೇಳಲಿಲ್ಲ ಎಂದು ಠಾಕೂರ್ ಹೇಳಿದರು. ಇನ್ನೂ ತನ್ನ ಖುಲಾಸೆ "ಸನಾತನ ಧರ್ಮ" ಮತ್ತು ಹಿಂದುತ್ವದ ವಿಜಯ ಎಂದು ಠಾಕೂರ್ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಸ್ಫೋಟವು ಅಭಿನವ್ ಭಾರತ್ ಗುಂಪನ್ನು ಒಳಗೊಂಡ ಪಿತೂರಿಯ ಭಾಗವಾಗಿದೆ ಎಂದು ಎಟಿಎಸ್ ಆರೋಪಿಸಿತ್ತು. 2008ರಲ್ಲಿ ಬಂಧಿಸಲ್ಪಟ್ಟ ಪ್ರಗ್ಯಾ ಠಾಕೂರ್ ಅವರು ಸ್ಫೋಟಕ್ಕೆ ಬಳಸಲಾದ ಮೋಟಾರ್ ಸೈಕಲ್‌ನ ಮಾಲೀಕ ಎಂದು ಎಟಿಎಸ್ ಆರೋಪ ಮಾಡಿತ್ತು. ಅಲ್ಲದೆ, ಆಗ ಮಿಲಿಟರಿ ಗುಪ್ತಚರ ವಿಭಾಗದಲ್ಲಿ ನಿಯೋಜನೆಗೊಂಡಿದ್ದ ಸೇನಾ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಸ್ಫೋಟಕಗಳನ್ನು ಜೋಡಿಸಲು ಸಹಾಯ ಮಾಡಿದರು ಮತ್ತು ಅಭಿನವ ಭಾರತ್ ಸಭೆಗಳ ಭಾಗವಾಗಿದ್ದರು ಎಂದು ಎಟಿಎಸ್ ಹೇಳಿತ್ತು.
2008, ಸೆಪ್ಟೆಂಬರ್ 29 ರಂದು ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ಮಾಲೆಗಾಂವ್ ಪಟ್ಟಣದಲ್ಲಿ ಮೋಟಾರ್ ಸೈಕಲ್‌ಗೆ ಎಲ್‌ಎಂಎಲ್ ಫ್ರೀಡಂ ಬೈಕ್ ಜೋಡಿಸಲಾದ ಸ್ಫೋಟಕ ಸಾಧನ ಸ್ಪೋಟಗೊಂಡು ಘಟನೆಯಲ್ಲಿ ಆರು ಮಂದಿ ದುರಂತ ಸಾವಿಗೀಡಾಗಿದ್ದರು. ಅಲ್ಲದೆ, 100ಕ್ಕೂ ಅಧಿಕ ಜನರು ಸ್ಫೋಟದಿಂದ ಗಾಯಗೊಂಡರು. ಪವಿತ್ರ ರಂಜಾನ್ ಮಾಸದಲ್ಲೇ ಈ ಭೀಕರ ಸ್ಫೋಟ ಸಂಭವಿಸಿತ್ತು. ಆರಂಭದಲ್ಲಿ ಈ ಪ್ರಕರಣವನ್ನ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ATS) ತನಿಖೆ ನಡೆಸಿತು.ಇದಾದ ನಂತರ 2011ರಲ್ಲಿ ಎನ್‌ಐಎಗೆ ವರ್ಗಾಯಿಸಲಾಯಿತು.
(ಏಜೆನ್ಸಿಸ್)
ಇನ್ನು ಅಭಿನವ್ ಭಾರತ್ ಗುಂಪು ಅಥವಾ ಸಂಘಟನೆ ಯಾವುದೇ “ಭಯೋತ್ಪಾದಕ ಚಟುವಟಿಕೆ"ಯಲ್ಲಿ ಭಾಗಿಯಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿ ನ್ಯಾಯಾಲಯವು ಎಲ್ಲ 7 ಆರೋಪಿಗಳನ್ನು ಈ ಆರೋಪ ಮುಕ್ತ ಮಾಡಿ, ಪ್ರಕರಣದಿಂದ ಖುಲಾಸೆಗೊಳಿಸಿದೆ.
ಆದರೆ, ಪುರೋಹಿತ್ ಅವರು ಆರ್‌ಡಿಎಕ್ಸ್ ತಂದು ಬಾಂಬ್ ಜೋಡಿಸಿದ್ದಕ್ಕೆ ಯಾವುದೇ ದಾಖಲೆಗಳಿಲ್ಲ ಎಂದು ಇಂದು (ಜುಲೈ 31) ನ್ಯಾಯಾಲಯ ಹೇಳಿದೆ. ಪ್ರಗ್ಯಾ ಠಾಕೂರ್ ಅವರು ವಾಹನದ ಮಾಲೀಕರು ಎಂಬುದಕ್ಕೂ ಯಾವುದೇ ಬಲವಾದ ಪುರಾವೆಗಳಿಲ್ಲ ಎಂದು ನ್ಯಾಯಾಧೀಶ ಲಹೋಟಿ ಅವರು ಹೇಳಿದ್ದಾರೆ.