ಹಗರಿಬೊಮ್ಮನಹಳ್ಳಿ: ತಾಲೂಕಿನಾದ್ಯಂತ 2ದಿನಗಳಿಂದ ಉತ್ತಮ ಮಳೆಯಾಗಿದ್ದು, ಹಳ್ಳಕೊಳ್ಳಗಳು ಭರ್ತಿಯಾಗಿದ್ದಲ್ಲದೆ, ಮಾಲವಿ ಜಲಾಶಯಕ್ಕೆ 14ಅಡಿಗಳಷ್ಟು ನೀರು ಸಂಗ್ರಹವಾಗಿದೆ. ತಾಲೂಕಿನ ಮಾಲವಿ ಜಲಾಶಯದ ಮೇಲ್ಭಾಗದಲ್ಲಿ ಗುರುವಾರ ರಾತ್ರಿ ಹಾಗೂ ಶುಕ್ರವಾರ ತಡರಾತ್ರಿ ಉತ್ತಂಗಿ, ಇಟ್ಟಿಗಿ ವ್ಯಾಪ್ತಿಯಲ್ಲೂ ಸತತ ಸುರಿದ ಉತ್ತಮ ಮಳೆಗೆ ಹಗರಿಹಳ್ಳಗಳು ತುಂಬಿ ಹರಿಯುತ್ತಿವೆ.
ಅಲ್ಲದೆ, ತಂಬ್ರಹಳ್ಳಿ, ಹಂಪಸಾಗರ ವ್ಯಾಪ್ತಿಗಳಲ್ಲಿಯೂ ಉತ್ತಮ ಮಳೆಯಾಗಿದ್ದು, ಕೆಲ ರೈತರ ಬೆಳೆಗಳು ಮಳೆಯ ಹೊಡೆತಕ್ಕೆ ನೆಲಕ್ಕುರುಳಿದರೆ, ಇನ್ನು ಕೆಲ ಬೆಳೆ ನೀರಿನಲ್ಲಿ ನಿಂತಿರುವುದು ಕಂಡುಬಂದದೆ.
ಕೊಟ್ಟೂರು ಮೇಲ್ಭಾಗದಲ್ಲಿ ಶುಕ್ರವಾರ ರಾತ್ರಿ ಮಳೆಯಾದ ಪರಿಣಾಮ ಗಡಿಗುಂಟೆ ಕೆರೆ ಕೋಡಿ ಬಿದ್ದಿದ್ದು, ಕೋಗಳಿ ತಾಂಡದ ಹಗರಿಹಳ್ಳ ಸೇತುವೆಯ ಮೇಲೆ ತುಂಬಿ ಹರಿಯುತ್ತಿದ್ದು, ಮಾಲವಿ ಜಲಾಶಯದತ್ತ ನೀರು ಹರಿದು ಬರುತ್ತಿದೆ
. ಈಗ ಹರಿದು ಬರುತ್ತಿರುವ ನೀರು ಮತ್ತು ಸತತ ಇನ್ನೆರಡು ದಿನ ಮಳೆಯಾದರೆ, ಬಹುತೇಕ ಮಾಲವಿ ಜಲಾಶಯ ಭರ್ತಿಯಾಗಿ ಹಗರಿಹಳ್ಳ ಈ ವರ್ಷವೂ ಹರಿಯಲಿದೆ ಎಂದು ಐತಿಹಾಸಿಕ ಚಿಮ್ಮನಹಳ್ಳಿ ದುರ್ಗಾಂಬಿಕಾ ಪೂಜಾರಿ ಮನೆತನದ ಮುಖ್ಯಸ್ಥ ಪೂಜಾರಿ ಸಿದ್ದಪ್ಪ ಅಭಿಪ್ರಾಯ ತಿಳಿಸಿದ್ದಾರೆ.
ಹ.ಬೊ.ಹಳ್ಳಿ-66.2 ಮೀ.ಮೀ, ತಂಬ್ರಹಳ್ಳಿ-47.2, ಹಂಪಸಾಗರ 60.4 ಹಾಗೂ ಮಾಲವಿ-61.2 ಮೀ.ಮೀ.ನಷ್ಟು ಮಳೆಯಾಗಿ, ಒಟ್ಟು 235.0ಮೀ.ಮೀ.ನಷ್ಟು ಮಳೆಯಾಗಿದೆ.
12ಎಚ್.ಬಿ.ಎಚ್: ಹಗರಿಬೊಮ್ಮನಹಳ್ಳಿ ತಾಲೂಕಿನ ಕೋಗಳಿ ತಾಂಡದ ಹಗರಿಹಳ್ಳ ಸೇತುವೆ ತುಂಬಿ ಹರಿಯುತ್ತಿರುವುದು.