

ಎಂ.ಕೆ.ಹುಬ್ಬಳ್ಳಿ: ಇಲ್ಲಿನ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಸಕ್ಕರೆ ಕಳ್ಳಸಾಗಣೆ ಮೂಲಕ 60 ಕೋಟಿ ರೂ.ಗೂ ಅಧಿಕ ಹಣ ಲೂಟಿ ಮಾಡಿ ಅವ್ಯವಹಾರ ನಡೆಸಲಾಗಿದೆ ಎಂದು ಆರೋಪಿಸಿದ ರೈತಸಂಘಗಳ ಒಕ್ಕೂಟದ ಮುಖಂಡರು ತಕ್ಷಣವೇ ಸಿಬಿಐ ತನಿಖೆಗೆ ಒಳಪಡಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಪಟ್ಟಣದ ಕಾರ್ಖಾನೆ ಎದುರು ರೈತರು ಶುಕ್ರವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ. ಕಳೆದ ಹಂಗಾಮಿನಲ್ಲಿ ಕಬ್ಬಿನ ಸಕ್ಕರೆ ಇಳುವರಿ ಕಡಿಮೆ ತೋರಿಸಿ, ಸಕ್ಕರೆಯನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ. 2017-18ನೇ ಸಾಲಿನಲ್ಲಿ ಟನ್ ಕಬ್ಬಿಗೆ 594ರೂ. ಹಣ ಪಾವತಿಸುವುದಾಗಿ ಹೇಳಿ ನಂತರ ಅದರಂತೆ ಆಡಳಿತ ಮಂಡಳಿ ನಡೆದುಕೊಂಡಿಲ್ಲ. ಅಕ್ರಮವಾಗಿ ಸಕ್ಕರೆ ಸಾಗಿಸುತ್ತಿದ್ದ ಲಾರಿಗಳನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದೇವೆ. ಆದರೂ ತಪ್ಪಿತಸ್ಥರ ಮೇಲೆ ಈವರೆಗೂ ಕ್ರಮವಾಗಿಲ್ಲ ಹಾಗೂ ಬಾಕಿ ಬಿಲ್ ಪಾವತಿಯಾಗಿಲ್ಲ ಎಂದು ಕಿಡಿಕಾರಿದ ರೈತರು, ಸಿಬಿಐ ತನಿಖೆಗೆ ಒಪ್ಪಿಸುವ ತನಕ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಅಢಾವೆ ಪತ್ರಿಕೆಯಲ್ಲಿ ಅವ್ಯವಹಾರ ಉಲ್ಲೇಖ: ಅವ್ಯವಹಾರ ನಡೆದಿರುವ ಬಗ್ಗೆ ಶುಕ್ರವಾರ ಬಿಡುಗಡೆಯಾದ ಕಾರ್ಖಾನೆಯ ಪ್ರಸಕ್ತ ಸಾಲಿನ ವಾರ್ಷಿಕ ಅಢಾವೆ ಪತ್ರಿಕೆಯಲ್ಲಿ ಉಲ್ಲೇಖವಾಗಿದೆ. 2022-23 ಮತ್ತು 2023-24ನೇ ಸಾಲಿನಲ್ಲಿ ಕಾರ್ಯನಿರ್ವಹಿಸಿದ ವ್ಯವಸ್ಥಾಪಕ ನಿರ್ದೇಶಕ ವೀರೇಶ ಹುಲಿಕಟ್ಟಿ ಸಕ್ಕರೆ ಇಳುವರಿ ಪ್ರಮಾಣ, ಮಾರಾಟ ಹಾಗೂ ಸಾಮಗ್ರಿ ಖರೀದಿಗೆ ಹೆಚ್ಚು ದರ ನಿಗದಿಪಡಿಸಿದ ಆರೋಪಗಳ ಬಗ್ಗೆಯೂ ಉಲ್ಲೇಖಿಸಲಾಗಿದೆ ಎಂದು ರೈತರ ಗಮನ ಸೆಳೆದರು. ರೈತಸಂಘಟನೆಗಳ ಒಕ್ಕೂಟದ ಮುಖಂಡರಾದ ಬಸವರಾಜ ಮೊಕಾಶಿ, ಬಸನಗೌಡ ಪಾಟೀಲ, ಶಶಿಕಾಂತ ನಾಯಕ, ಗಣೇಶ ಇಳಿಗೇರ, ಮಹಾಂತೇಶ ಕಮತ, ರುದ್ರಪ್ಪ ಕೊಡ್ಲಿ, ಸಂಜೀವಕುಮಾರ ತಿಲಗರ, ಬೀರಪ್ಪ ದೇಶನೂರ, ಆನಂದ ಹುಚ್ಚಗೌಡ್ರ, ಶಿವಾನಂದ ಜೋಶಿ, ಮುಖಂಡರು ಹಾಗೂ ನೂರಾರು ರೈತರು ಪಾಲ್ಗೊಂಡಿದ್ದರು.