

ಗುರುಪುರ: ಮಳಲಿಯಲ್ಲಿ ನಿರ್ಮಿಸಲಾದ ಕಿಂಡಿ ಅಣೆಕಟ್ಟಿನ ತೀರಾ ಹತ್ತಿರದಲ್ಲಿ ಮರಳುಗಾರಿಕೆ ನಡೆಯುತ್ತಿದ್ದು, ಕೃಷಿ ಮತ್ತು ನಾಲ್ಕು ಗ್ರಾಪಂ ವ್ಯಾಪ್ತಿಗೆ ಕುಡಿಯುವ ನೀರು ಪೂರೈಕೆ ಉದ್ದೇಶಕ್ಕಾಗಿ 4 ವರ್ಷದ ಹಿಂದೆ ನಿರ್ಮಿಸಲಾದ ಅಣೆಕಟ್ಟೆಗೆ ಸೂಕ್ತ ರಕ್ಷಣೆ ಒದಗಿಸುವಂತೆ ಗಂಜೀಮಠ ಗ್ರಾಮಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು.
ಗಂಜಿಮಠ ಗ್ರಾಪಂನ ದ್ವಿತೀಯ ಹಂತದ ಗ್ರಾಮಸಭೆ ಪಂಚಾಯಿತಿ ಅಧ್ಯಕ್ಷೆ ಮಾಲತಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು. ವಿಷಯ ಪ್ರಸ್ತಾಪಿಸಿದ ಪಂಚಾಯಿತಿ ಮಾಜಿ ಸದಸ್ಯ ಬೂಬ ಪೂಜಾರಿ ಮಾತನಾಡಿ, ಅಣೆಕಟ್ಟು ಸಮೀಪ ಮರಳುಗಾರಿಕೆ ನಡೆಸಲು ಟೆಂಡರ್‌ನಲ್ಲಿ ಅವಕಾಶ ಕಲ್ಪಿಸಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಪಂಚಾಯಿತಿ ವತಿಯಿಂದ ಪತ್ರ ಗುಜರಾಯಿಸಿ ಅಣೆಕಟ್ಟು ಮತ್ತು ಪೊಳಲಿ ದೇವಸ್ಥಾನಕ್ಕೆ ಸಂಬಂಧಪಟ್ಟ ‘ಜಳಕದ ಕರೆ’ ರಕ್ಷಿಸುವ ಕೆಲಸ ಮಾಡಬೇಕೆಂದರು.
ಅಣೆಕಟ್ಟು ರಕ್ಷಿಸುವ ನಿಟ್ಟಿನಲ್ಲಿ, ಅಣೆಕಟ್ಟಿನಿಂದ ನಿರ್ದಿಷ್ಟ ಅಂತರ ಕಾಪಾಡಿಕೊಂಡು ಮರಳುಗಾರಿಕೆಗೆ ಅವಕಾಶ ನೀಡುವಂತೆ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯಲಾಗುವುದು ಎಂದು ಪಂಚಾಯಿತಿ ಅಧ್ಯಕ್ಷೆ ಮಾಲತಿ ಭರವಸೆ ನೀಡಿದರು.
* ರಸ್ತೆಗೆ ಆಗ್ರಹ: ಮೊಗರು ಗ್ರಾಮದ ಎಂಬದೋಟ ಎಂಬಲ್ಲಿ 4 ಮನೆಗೆ ರಸ್ತೆ ನಿರ್ಮಿಸಲು ಜಿಲ್ಲಾಧಿಕಾರಿ ಸೂಚನೆ ಮೇರೆಗೆ 9.80 ಸೆಂಟ್ಸ್ ಜಾಗ ಮಂಜೂರಾಗಿದ್ದರೂ ರಸ್ತೆ ನಿರ್ಮಿಸುವಲ್ಲಿ ಪಂಚಾಯಿತಿನಿಂದ ಈವರೆಗೆ ಸ್ಪಂದನೆ ಸಿಕ್ಕಿಲ್ಲ. ಪ್ರತಿ ಗ್ರಾಮಸಭೆಯಲ್ಲಿ ಅಹವಾಲು ಸಲ್ಲಿಸುವುದೇ ನಮ್ಮ ಕೆಲಸವಾಯಿತು ಎಂದು ಕೃಷ್ಣಪ್ಪ ದೂರಿದರು.
ಹಿಂದಿನ ಮಳೆಗಾಲದಲ್ಲಿ ಪಂಚಾಯಿತಿ ವ್ಯಾಪ್ತಿಯ ಕಂಚಿನಗೋಳಿ ಎಂಬಲ್ಲಿ ಯಶವಂತಿ ಆಚಾರ್ಯ ಎಂಬುವರ ಮನೆ ಕುಸಿದು ಬಿದ್ದು ಪರಿಹಾರವಾಗಿ ಮಂಜೂರಾಗಿದ್ದ 3 ಲಕ್ಷ ರೂ.ನಲ್ಲಿ ಈವರೆಗೆ 1.20 ಲಕ್ಷ ರೂ.ಮಾತ್ರ ಕೈಸೇರಿದೆ. ಉಳಿದ ಹಣ ಇನ್ನೂ ಬಂದಿಲ್ಲ. ಈ ಬಗ್ಗೆ ಆಚಾರ್ಯ ಪ್ರಶ್ನಿಸಿದಾಗ, ಅನುದಾನವಿಲ್ಲದೆ ಹಣ ಬಂದಿಲ್ಲ ಎಂದು ಅಧ್ಯಕ್ಷೆ ಮಾಲತಿ ಸ್ಪಷ್ಟಪಡಿಸಿದ್ದಾರೆ.
* ಯೋಜನೆ ಮಾಹಿತಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಅಶ್ವಿನಿ, ಅರಣ್ಯ ಇಲಾಖೆ ಗಸ್ತು ಅಧಿಕಾರಿ ಕ್ಯಾತಲಿಂಗ, ಬಜ್ಪೆಯ ಪಶು ವೈದ್ಯಾಧಿಕಾರಿ ಮನೋಹರ್, ಗ್ರಾಮಕರಣಿಕ ಮೊಹಬೂಬ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆನಂದ್, ಕೈಕಂಬ ಮೆಸ್ಕಾಂನ ಅಧಿಕಾರಿ ದೇವಿಪ್ರಸಾದ್ ತಮ್ಮ ಇಲಾಖೆಗಳ ಯೋಜನೆ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಿದರು.
ಪಂಚಾಯಿತಿ ಪಿಡಿಒ ಪ್ರಕಾಶ್ ಬಿ.ಸ್ವಾಗತಿಸಿ ಆಡಳಿತ ವರದಿ ಮಂಡಿಸಿದರು. ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಮುಹಮ್ಮದ್ ಶರೀಫ್ ಹಿಂದಿನ ಗ್ರಾಮಸಭೆ ನಿರ್ಣಯಗಳ ವರದಿ ವಾಚಿಸಿದರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ವೀಣಾ ನೋಡೆಲ್ ಅಧಿಕಾರಿಯಾಗಿ ಸಭೆ ನಿರ್ವಹಿಸಿದರು. ಪಂಚಾಯಿತಿ ಉಪಾಧ್ಯಕ್ಷೆ ಸಾರಮ್ಮ, ಸದಸ್ಯರು, ಅಂಗನವಾಡಿ ಮತ್ತು ಆರೋಗ್ಯ ಕಾರ್ಯಕರ್ತರು ಉಪಸ್ಥಿತರಿದ್ದರು.
ಜೆಜೆಎಂ ಅಸಮರ್ಪಕ ಅನುಷ್ಠಾನ
ಗ್ರಾಮದಲ್ಲಿ ಜಲಜೀವನ್ ಮಿಷನ್(ಜೆಜೆಎಂ) ಯೋಜನೆಯ ಅಸಮರ್ಪಕ ಅನುಷ್ಠಾನ, ದಾರಿದೀಪ ಹಾಗೂ ಪಂಚಾಯಿತಿ ವ್ಯಾಪ್ತಿಯ ನಾರ್ಲಪದವಿನಲ್ಲಿ ರಸ್ತೆ ಮತ್ತು ವಿದ್ಯುತ್ ಸಮಸ್ಯೆಯ ಜತೆಯಲ್ಲಿ, ಕೈಕಂಬದಲ್ಲಿ ವಿದ್ಯುತ್ ಬಿಲ್ ಪಾವತಿಸುವ ಕೌಂಟರ್ ಪುನಃ ಆರಂಭಿಸಬೇಕು ಎಂಬಿತ್ಯಾದಿ ಆಗ್ರಹಗಳು ಗ್ರಾಮಸಭೆಯಲ್ಲಿ ಕೇಳಿ ಬಂದವು.
ಮದ್ಯದಂಗಡಿ ಬಳಿ ಕುಡುಕರಿಗೆ ಶೆಲ್ಟರ್ !
ಗ್ರಾಮಸ್ಥ ದಾಮೋದರ ಮಾತನಾಡಿ, ಮದ್ಯ ಮಾರಾಟದ ಆದಾಯದಲ್ಲಿ ರಾಜ್ಯದಲ್ಲೇ ಅಬಕಾರಿ ಇಲಾಖೆ ಮಂಚೂಣಿಯಲ್ಲಿದೆ. ಸಾಕಷ್ಟು ಆದಾಯವಿರುವ ಸಾರಿಗೆ ಇಲಾಖೆ ಬಸ್ ಪ್ರಯಾಣಿಕರಿಗೆ ಅಲ್ಲಲ್ಲಿ ತಂಗುದಾಣ ನಿರ್ಮಿಸಿದಂತೆ, ಸಾರ್ವಜನಿಕ ಸ್ಥಳಗಳಲ್ಲಿ ತೂರಾಡುವ ವ್ಯಸನಿಗಳಿಗೆ ಮದ್ಯದಂಗಡಿ ಬಳಿಯಲ್ಲೇ ‘ಶೆಲ್ಟರ್’ ರಚಿಸಲು ಸಾಧ್ಯವಿಲ್ಲವೇ ಎಂದರು. ಇದಕ್ಕೆ ಉತ್ತರಿಸಿದ ಅಬಕಾರಿ ನಿರೀಕ್ಷಕಿ ಸುಮಾ ಮದ್ಯ ವ್ಯಸನಿಗಳಿಗೆ ಶೆಲ್ಟರ್ ವ್ಯವಸ್ಥೆ ಸರ್ಕಾರಕ್ಕೆ ಸಂಬಂಧಿಸಿದ ವಿಷಯ. ನಾವು ಸರ್ಕಾರದ ಆದೇಶ ಪಾಲಿಸುವ ಅಧಿಕಾರಿಗಳು ಎಂದರು.