

ಮುಂಡರಗಿ: ದೇವರು ಕೊಟ್ಟಿರುವ ಸಮಯ, ಪ್ರಕೃತಿ ಕೊಟ್ಟಿರುವ ಆರೋಗ್ಯವನ್ನು ಚೆನ್ನಾಗಿ ಸದ್ಭಳಕೆ ಮಾಡಿಕೊಂಡರೆ ಜೀವನ ಸಾರ್ಥಕವಾಗುತ್ತದೆ. ಎಲ್ಲರೂ ಶ್ರಮವಹಿಸಿ ದುಡಿದು ಬಾಳಬೇಕು. ದುಡಿದರೆ ಮಾತ್ರ ನೆಮ್ಮದಿ ಕಾಣಲು ಸಾಧ್ಯ ಎಂದು ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ಆಷಾಢ ಮಾಸದ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ಅನುಭಾವಿಗಳ ಅನುಭಾವ ದರ್ಶನ ಪ್ರವಚನ ಮಾಲಿಕೆ ಪ್ರಾರಂಭೋತ್ಸವ, ಶಿವಶರಣ ಹಡಪದ ಅಪ್ಪಣ್ಣ ಹಾಗೂ ಶರಣೆ ಲಿಂಗಮ್ಮನವರ ಸ್ಮರಣೋತ್ಸವ, 57ನೇ ತ್ರೈಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಸಮಯ ಹಾಳು ಮಾಡುವವರು ಜೀವನದ ಅನುಭಾವ ಅನುಭವಿಸುವುದಿಲ್ಲ. ಆರೋಗ್ಯ ಕಾಪಾಡಿಕೊಳ್ಳದವರ ಹಣ ವ್ಯರ್ಥವಾಗುತ್ತದೆ. ಸಮಯ, ಆರೋಗ್ಯ ಸದ್ಭಳಕೆ ಮಾಡಿಕೊಂಡವರೇ ಶ್ರೀಮಂತರು. ಜೀವನದಲ್ಲಿ ಹೇಗೆ ನಡೆ, ನುಡಿ ಇಟ್ಟುಕೊಂಡಿದ್ದೀವಿ ಎನ್ನುವುದು ಅರಿಯಬೇಕು. ಇದನ್ನೆ ಶರಣರು ಹೇಳಿಕೊಟ್ಟಿದ್ದಾರೆ. ನಡೆ, ನುಡಿ ಶುದ್ಧವಿರದಿದ್ದರೆ ಏನು ಗಳಿಸಿದರೂ ಪ್ರಯೋಜನವಿಲ್ಲ ಎಂದರು.
ವ್ಯಾಸ ಮಹರ್ಷಿಗಳು ಜಗತ್ತಿನ ಮೊದಲು ಗುರು. ಗುರುಪೂರ್ಣಿಮೆ ಎಂದರೆ ವ್ಯಾಸ ಪೂರ್ಣಿಮೆ. ವ್ಯಾಸ ಪೀಠ ಮತ್ತು ಶೂನ್ಯಪೀಠದವರಿಗೆ ಜಾತಿ, ಮತ, ಪಂಥಗಳಿರಬಾರದು ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಡಾ.ಚಂದ್ರು ಲಮಾಣಿ ಮಾತನಾಡಿ, ಶಿಕ್ಷಣದಿಂದ ಮಾತ್ರ ಜೀವನದಲ್ಲಿ ಬದಲಾವಣೆ ಕಾಣಲೂ ಸಾಧ್ಯ. ಆದರೆ, ಇತ್ತೀಚೆಗೆ ಶಿಕ್ಷಣವಂತರೇ ದಾರಿ ತಪ್ಪುತ್ತಿದ್ದಾರೆ. ಹಡಪದ ಸಮಾಜದವರು ಮನುಷ್ಯರನ್ನು ಸುಂದರಗೊಳಿಸುವ ಕೆಲಸ ಮಾಡುತ್ತಾರೆ. ಎಲ್ಲರೂ ಧರ್ಮದ ಅಡಿಯಲ್ಲಿ ನಡೆಯಬೇಕು ಎಂದರು.
ಬೇಲೂರು ಶ್ರೀಮಹಾಂತ ಸ್ವಾಮೀಜಿ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಪ್ರಗತಿಪರ ರೈತ ಈಶ್ವರಪ್ಪ ಹಂಚಿನಾಳ ಮಾತನಾಡಿದರು. ಪ್ರಗತಿಪರ ರೈತ ಈಶ್ವರಪ್ಪ ಹಂಚಿನಾಳ, ಆರ್ಎಫ್ಒ ವೀರೇಂದ್ರ ಮರಿಬಸಣ್ಣವರ, ಕೆಎಂಎಫ್ ನಿರ್ದೇಶಕ ಲಿಂಗರಾಜಗೌಡ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಪ್ರವಚನ ಸಮಿತಿ ಅಧ್ಯಕ್ಷ ಎಸ್.ಎಸ್. ಗಡ್ಡದ ಅಧ್ಯಕ್ಷತೆ ವಹಿಸಿದ್ದರು. ಕಸ್ತೂರೆಮ್ಮ ನಾವಿ ಮತ್ತು ಬಸವರಾಜ ಹೂಗಾರ ಅವರು ಭಕ್ತಿಸೇವೆ ವಹಿಸಿಕೊಂಡಿದ್ದರು.
ಕವಿತಾ ಉಳ್ಳಾಗಡ್ಡಿ, ಎಚ್. ವಿರೂಪಾಕ್ಷಗೌಡ್ರ, ಹೇಮಗಿರೀಶ ಹಾವಿನಾಳ, ಈರಣ್ಣ ಹಡಪದ, ಓಂಪ್ರಕಾಶ ಲಿಂಗಶೆಟ್ಟರ, ಅಡಿವೆಪ್ಪ ಚಲವಾದಿ, ವೀರೇಂದ್ರ ಅಂಗಡಿ, ಶಿವಕುಮಾರ ಬೆಟಗೇರಿ, ವಿಶ್ವನಾಥ ಉಳ್ಳಾಗಡ್ಡಿ, ಪವನ ಚೋಪ್ರಾ ಇತರರಿದ್ದರು. ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಕೊಟ್ರೇಶ ಅಂಗಡಿ ನಿರ್ವಹಿಸಿದರು.