ಗೋಕರ್ಣ: ಸ್ಥಳೀಯವಾಗಿ ನೃತ್ಯ ಶಿಕ್ಷಣ ನೀಡುತ್ತಿರುವ ಮೈತ್ರೇಯಿ ನೃತ್ಯ ಕಲಾ ಟ್ರಸ್ಟ್ ದಶಮಾನೋತ್ಸವ ಜ. 25 ಮತ್ತು 26ರಂದು ಆಯೋಜಿತವಾಗಿದ್ದು, ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಇಲ್ಲಿನ ಪುಣ್ಯಾಶ್ರಮದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಸಭಾಭವನದಲ್ಲಿ ಬಿಡುಗಡೆ ಮಾಡಲಾಯಿತು.
ಈ ಕುರಿತು ಮಾತನಾಡಿದ ಸಂಸ್ಥೆ ಅಧ್ಯಕ್ಷೆ ಸೌಮ್ಯ ಹೆಗಡೆ, ಶಿರಸಿಯಲ್ಲಿ ಕೇಂದ್ರಸ್ಥಾನ ಹೊಂದಿರುವ ಟ್ರಸ್ಟ್ ಕಳೆದ ಹತ್ತು ವರ್ಷಗಳಿಂದ ಗೋಕರ್ಣದಲ್ಲಿಯೂ ಶಾಖೆ ತೆರೆದು ಈವರೆಗೆ ನೂರಾರು ವಿದ್ಯಾರ್ಥಿಗಳಿಗೆ ನೃತ್ಯ ಶಿಕ್ಷಣ ನೀಡಿದೆ. ಸ್ಥಳೀಯ ಸಮಿತಿಯ ನೇತೃತ್ವದಲ್ಲಿ ಎರಡು ದಿನ ಸಮುದ್ರ ತೀರದ ವಿಶೇಷ ವೇದಿಕೆಯಲ್ಲಿ ದಶಮಾನೋತ್ಸವ ನಿಮಿತ್ತ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೋ›ತ್ಸಾಹಿಸುವಂತೆ ವಿನಂತಿಸಿದರು.
ಜ. 25ರಂದು ಬೆಳಗ್ಗೆ 10 ಗಂಟೆಗೆ ದಶಮಾನೋತ್ಸವ ಸಮಾರಂಭವನ್ನು ಪ್ರಸಿದ್ಧ ಯಕ್ಷಗಾನ ಕಲಾವಿದ ಶಂಕರ ಹೆಗಡೆ ನೀಲ್ಕೋಡು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಇಲ್ಲಿನ ಆನುವಂಶೀಯ ಉಪಾಧಿವಂತ ಮಂಡಳದ ಅಧ್ಯಕ್ಷ ವೇ. ರಾಜಗೋಪಾಲ ಅಡಿ, ಸಸ್ಯ ಸಂಜೀವಿನ ಪಂಚಕರ್ಮ ಕೇಂದ್ರದ ಡಾ. ಪತಂಜಲಿ ಶರ್ಮ,ಪಂಚಾಯಿತಿ ಅಧ್ಯಕ್ಷೆ ಸುಮನಾ ಗೌಡ, ನೃತ್ಯ ಶಿಕ್ಷಕಿ ವಿದುಷಿ ಅನುರಾಧಾ ಹೆಗಡೆ ಶಿರಸಿ ಮತ್ತು ಪೊಲೀಸ್ ಇನಸ್ಪೆಕ್ಟರ್ ವಸಂತ ಆಚಾರ್ ಭಾಗವಹಿಸುವರು. ಆನಂದಾಶ್ರಮ ಪ್ರೌಢಶಾಲೆ ಮುಖ್ಯಾಧ್ಯಾಪಕ ಗಂಗಾಧರ ಭಟ್ಟ ಅಧ್ಯಕ್ಷತೆ ವಹಿಸುವರು. ಸಂಜೆ 5 ಗಂಟೆಯಿಂದ ಜಿಲ್ಲೆ ಮತ್ತು ಹೊರ ಜಿಲ್ಲೆಯ ವಿವಿಧೆಡೆಗಳ ನೃತ್ಯ ಕಲಾವಿದರಿಂದ ವಿಶೇಷ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮಗಳು ನಡೆಯಲಿವೆ.ಜ. 26ರಂದು ಸಂಜೆ 4 ಗಂಟೆಯಿಂದ ಖ್ಯಾತ ಕಲಾವಿದರಿಂದ ಹಿಂದುಸ್ತಾನಿ ಸಂಗೀತ, ಭರತ ನಾಟ್ಯ ಹಾಗೂ ನೃತ್ಯ ರೂಪಕ ಏರ್ಪಾಟಾಗಿದೆ. ರಾತ್ರಿ ‘ಮಾರುತಿ ಪ್ರತಾಪ’ ಯಕ್ಷಗಾನ ಆಯೋಜಿಸಲಾಗಿದ್ದು, ಅಶ್ವಿನಿ ಕೊಂಡದಕುಳಿ, ಮಯೂರಿ ಉಪಾಧ್ಯಾಯ, ನಿರ್ಮಲಾ ಹೆಗಡೆ ಗೋಳಿಕೊಪ್ಪ, ಸೌಮ್ಯಾ ಪ್ರದೀಪ ಹೆಗಡೆ ಮತ್ತಿತರ ಕಲಾವಿದರು ಭಾಗವಹಿಸುವರು.
ಆಮಂತ್ರಣ ಪತ್ರಿಕೆ ಬಿಡುಗಡೆಯಲ್ಲಿ ಕಾರ್ಯದರ್ಶಿ ರಾಜಲಕ್ಷ್ಮೀ ಉಡುಪ, ಪೋಷಕರಾದ ತನುಜಾ ರಾಜಗೋಪಾಲ ಅಡಿ ಮತ್ತು ಸುಮಂಗಲಾ ಗಣಪತಿ ಭಟ್ಟ ಹಿರೇ ಇದ್ದರು.