

ಉಡುಪಿ: ದಲಿತ ಸಮುದಾಯಗಳಿಗೆ ಮಾತನಾಡಲು ಶಕ್ತಿ ಕೊಟ್ಟ, ಎಲ್ಲ ಗ್ರಂಥಗಳಿಗಿಂತ ಶ್ರೇಷ್ಠ ಸಂವಿಧಾನವೆಂಬ ಗ್ರಂಥ ಕೊಟ್ಟ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ನಮಗೆಲ್ಲ ದೇವರು ಎಂದು ಡಾ.ವಿಠ್ಠಲ್ ವಗ್ಗನ್ ವಾದ ಮಂಡಿಸಿದರು.
ಭಾನುವಾರ ಆದಿಉಡುಪಿ ಅಂಬೇಡ್ಕರ್ ಭವನದಲ್ಲಿ ನಡೆದ ಮಹಿಷ ದಸರಾದಲ್ಲಿ ಅವರು ಮಾತನಾಡಿದರು. ಅಂಬೇಡ್ಕರ್ ಆಶಯದಂತೆ ಎಲ್ಲ ದಲಿತ ಸಮುದಾಯಗಳು ಮೌಢ್ಯದಿಂದ ಹೊರಬರಬೇಕು. ಮೌಢ್ಯ ಆಚರಣೆಗೆ ಮುಂದಾಗಬಾರದು ಎಂದರು.
ರಾಕ್ಷಸರಲ್ಲ, ರಕ್ಷಕರು
ರಾಕ್ಷಸರೆಂದರೆ ಕೆಟ್ಟವರಲ್ಲ. ವಾಲ್ಮೀಕಿ ಬರೆದ ರಾಮಾಯಣದ ಉತ್ತರಕಾಂಡದ 13ನೇ ಶ್ಲೋಕವು ರಾಕ್ಷಸರೆಂದರೆ ರಕ್ಷಕರು ಎಂದು ಉದಾಹರಿಸಿದೆ. ಇದು ವಾಲ್ಮೀಕಿ ಉದಾಹರಿಸಿದ್ದು. ಭರತಖಂಡದಲ್ಲಿ ಮಹಿಷನ ಆಳ್ವಿಕೆಯಿತ್ತು. ದ್ರಾವಿಡರ ಪ್ರಬಲ ರಾಜ ಆತನಾಗಿದ್ದ. ಮಹಿ ಎಂದರೆ ಭೂಮಿ, ಷ ಎಂದರೆ ಈಶ ಅಥವಾ ಅಧಿಪತಿ ಎಂರ್ಬಥವಿದೆ ಎಂದು ಡಾ.ವಿಠ್ಠಲ್ ವಗ್ಗನ್ ಹೇಳಿದರು.
ಬಂಟಿಂಗ್ಸ್, ಬ್ಯಾನರ್ ಅಳವಡಿಸದಂತೆ ಹಾಗೂ ಮೆರವಣಿಗೆ ಮಾಡದಂತೆ ಜಿಲ್ಲಾಡಳಿತ ಅ.14, 15ರಂದು ನಿಷೇಧಾಜ್ಞೆ ಹೇರಿದ್ದರಿಂದ ಅಂಬೇಡ್ಕರ್ ಭವನದ ಗೇಟಿನಿಂದ ಭವನದವರೆಗೆ 100 ಮೀಟರ್ನಷ್ಟು ಜಾಗದಲ್ಲಿ ಮಹಿಷಾಸುರನ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಲಾಯಿತು.
ಅಂಬೇಡ್ಕರ್ ಯುವಸೇನೆ ಉಡುಪಿ ಜಿಲ್ಯಾಧ್ಯಕ್ಷ ಹರೀಶ್ ಸಾಲ್ಯಾನ್ ಮಲ್ಪೆ ಅಧ್ಯಕ್ಷತೆ ವಹಿಸಿದ್ದರು. ವಿಭಾಗೀಯ ಸಂಚಾಲಕ ಶೇಖರ ಹೆಜಮಾಡಿ, ಪ್ರಗತಿಪರ ಚಿಂತಕ ಶ್ರೀರಾಮ ದಿವಾಣ, ದಲಿತ ಚಿಂತಕ ನಾರಾಯಣ ಮಣೂರು, ಅಂಬೇಡ್ಕರ್ ಯುವಸೇನೆ ಉಡುಪಿ ತಾಲೂಕಾಧ್ಯಕ್ಷ ದಯಾನಂದ ಕಪ್ಪೆಟ್ಟು ಉಪಸ್ಥಿತರಿದ್ದರು. ಸುಮಿತ್ ನೆರ್ಗಿ ಸ್ವಾಗತಿಸಿದರು. ಅಂಬೇಡ್ಕರ್ ಯುವಸೇನೆಯ ಕಾಪು ತಾಲೂಕಾಧ್ಯಕ್ಷ ಲೋಕೇಶ್ ಪಡುಬಿದ್ರಿ ವಂದಿಸಿದರು. ದಲಿತ ಮುಖಂಡ ದಯಾಕರ್ ಮಲ್ಪೆ ನಿರೂಪಿಸಿದರು.