

ಹೈದರಾಬಾದ್: ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದರಲ್ಲಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ನಿಲ್ಲುತ್ತಾರೆ. ಅದೇ ರೀತಿ ಇದೀಗ ಮೆಗಾಸ್ಟಾರ್ ಚಿರಂಜೀವಿ ಪುತ್ರಿ ನಿಹಾರಿಕಾ ನಿರ್ಮಾಪಕಿಯಾಗಿ ತಮ್ಮ ಮೊದಲ ಚಿತ್ರವನ್ನು ಪ್ರೇಕ್ಷಕರ ಮುಂದೆ ತಂದಿದ್ದು, ಕಡಿಮೆ ಬಜೆಟ್ನ ಈ ಚಿತ್ರ ಯಶಸ್ಸಿನ ಹಾದಿಯಲ್ಲಿ ಮುನ್ನುಗ್ಗುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದಲ್ಲದೆ, ಬೆಂಬಲವನ್ನೂ ವ್ಯಕ್ತಪಡಿಸಿದ್ದಾರೆ.
ಕಮಿಟಿ ಕುರ್ರೋಳ್ಳು ಚಿತ್ರದ ಮೂಲಕ ನಿಹಾರಿಕಾ 11 ನಾಯಕರು ಮತ್ತು 4 ನಾಯಕಿಯರನ್ನು ಟಾಲಿವುಡ್‌ಗೆ ಪರಿಚಯಿಸಿದ್ದಾರೆ. ಆ.9ರ ಶುಕ್ರವಾರ ಬಿಡುಗಡೆಯಾದ ಚಿತ್ರಕ್ಕೆ ವಿಶ್ವಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೇವಲ ಮೂರೇ ದಿನಗಳಲ್ಲಿ ಚಿತ್ರ 6.04 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.
ಕಂಟೆಂಟ್ ಇದ್ದರೆ ಚಿಕ್ಕ ಚಿತ್ರವಾದರೂ ಕಲೆಕ್ಷನ್ ಬರುತ್ತೆ ಅಂತ ಮತ್ತೊಮ್ಮೆ ಮಹೇಶ್ ಬಾಬು ಹೇಳಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾ ನೋಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ನಿರ್ಮಾಪಕಿಯಾಗಿ ನಿಮ್ಮ ಮೊದಲ ಚಿತ್ರಕ್ಕೆ ಶುಭಾಶಯಗಳು. ಚಿತ್ರವನ್ನು ಯಶಸ್ವಿಗೊಳಿಸಿದ ಇಡೀ ಚಿತ್ರತಂಡಕ್ಕೆ ನನ್ನ ಅಭಿನಂದನೆಗಳು ಎಂದು ಮಹೇಶ್ ಬಾಬು ನಿಹಾರಿಕಾ ಅವರಿಗೆ ಪೋಸ್ಟ್ ಮಾಡಿ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.
ಈಗಾಗಲೇ ಸೂಪರ್ ಟಾಕ್ ಪಡೆದಿರುವ ಕಮಿಟಿ ಕುರ್ರಾಳ್ಳು ಈಗ ಮಹೇಶ್ ರಿಯಾಕ್ಷನ್ ನಂತರ ಮತ್ತಷ್ಟು ಸದ್ದು ಮಾಡಿದೆ. ಮಹೇಶ್ ಅಭಿಮಾನಿಗಳು ಸಿನಿಮಾ ಟಿಕೆಟ್ ಬುಕ್ ಮಾಡುತ್ತಿದ್ದೇವೆ ಎಂದು ಕಮೆಂಟ್ ಹಾಕುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಲಾಭ ಗಳಿಸಿರುವ ಈ ಸಿನಿಮಾ ಮಹೇಶ್ ನೀಡಿದ ಬೆಂಬಲದಿಂದ ಮತ್ತಷ್ಟು ಯಶಸ್ಸು ಕಾಣುವುದರಲ್ಲಿ ಅನುಮಾನವಿಲ್ಲ ಎನ್ನಲಾಗುತ್ತಿದೆ.