

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಬದುಕು ಮತ್ತು ಬದುಕಲು ಬಿಡಿ ಎಂಬ ಸಿದ್ಧಾಂತ ನಮ್ಮ ಬದುಕಿಗೆ ದಾರಿ ದೀಪ. ಭಗವತ್ ಸಾಕ್ಷಾತ್ಕಾರಕ್ಕೆ ಮುನ್ನುಡಿ ಇರುವುದೇ ಆತ್ಮತೃಪ್ತಿಯ ಸನ್ನಿಧಿಯಲ್ಲಿ. ಗುಣವಂತರಾಗಿ, ಕಷ್ಟದಲ್ಲಿರುವವರಿಗೆ ಬಲವಾಗಿ, ಸೌಜನ್ಯ, ಸೌಶೀಲ್ಯ, ಸೌಮನಸ್ಸುಗಳು ನಮ್ಮ ಸಂಸಾರವಾದರೆ ನಮ್ಮ ಹೃದಯದಲ್ಲಿ ಭಗವಂತ ನೆಲೆಗೊಂಡು ನಮ್ಮ ಎಲ್ಲ ಕೆಲಸಗಳಿಗೆ ಭಗವದನುಗ್ರಹ ಇರುತ್ತದೆ. ಮಹಾತ್ಮರ, ಸಂತರ ಜೀವನ ನಮ್ಮ ಬದುಕಿಗೆ ಹೊಸ ಬೆಳಕಿನ ದಾರಿ ಎಂದು ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಹೇಳಿದರು.
ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಗುರುವಾರ ಶ್ರೀ ಮಹಾವೀರ ಸ್ವಾಮಿಯ 2624ನೇ ಜನ್ಮ ಕಲ್ಯಾಣ ಮಹೋತ್ಸವ ಆಚರಣೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಸನ್ಮತಿ ಮಹಾವೀರ ಶಾಂತಿ ಪುರಸ್ಕಾರ: ಎಕ್ಸಲೆಂಟ್ ಮೂಡುಬಿದಿರೆ ಸಂಸ್ಥೆ ಈ ವರ್ಷದಿಂದ ಕೊಡಮಾಡುವ ಸನ್ಮತಿ ಮಹಾವೀರ ಶಾಂತಿ ಪುರಸ್ಕಾರವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ ಮಂಗಳೂರಿನ ವಿಶ್ರಾಂತ ಪ್ರಾಂಶುಪಾಲ ಪ್ರೊ.ಅರಳ ರಾಜೇಂದ್ರ ಶೆಟ್ಟಿ ಅವರಿಗೆ ನೀಡಿ ಗೌರವಿಸಲಾಯಿತು.
ಪುರಸ್ಕಾರಕ್ಕೆ ಪ್ರತಿಕ್ರಿಯಿಸಿದ ಅರಳ ರಾಜೇಂದ್ರ ಶೆಟ್ಟಿ, ಚೈತನ್ಯ ಈ ನೆಲದ ಕಣಕಣದಲ್ಲೂ ಅಂತರ್ಯಾಮಿಯಾಗಿದೆ. ಅದನ್ನು ಕಾಣುವ ಕಣ್ಣಿರಬೇಕು. ಕಲ್ಲಿನೊಳಗಿನ ದೈವನಿಹಿತ ಶಕ್ತಿಯನ್ನು ಕಂಡ ಯುವರಾಜರು ಅದರ ಸಾಕ್ಷಾತ್ಕಾರದ ಪಣ ತೊಟ್ಟರು. ಅವರ ಪತ್ನಿ ರಶ್ಮಿತಾ ಜೈನ್ ಜತೆಗೂಡಿದರು. ಈ ನೆಲದಲ್ಲಿ ಕಲ್ಲರಳಿ ಹೂವಾಯಿತು ಎಂದರು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕೃಷ್ಣರಾಜ ಹೆಗ್ಡೆ ಉಪಸ್ಥಿತರಿದ್ದರು. ಕಾರ್ಯದರ್ಶಿ ರಶ್ಮಿತಾ ಜೈನ್ ಪ್ರಸ್ತಾವನೆಗೈದರು. ಉಪನ್ಯಾಸಕ ಸುನಾದ್ ರಾಜ್ ಜೈನ್ ವಂದಿಸಿದರು. ಸಂಸ್ಥೆಯ ಆಡಳಿತ ನಿರ್ದೇಶಕ ಡಾ.ಬಿ.ಪಿ.ಸಂಪತ್ ಕುಮಾರ್ ನಿರೂಪಿಸಿದರು.
ಶ್ರಾವಕ ಅಜಿತ್ ನಾರಾವಿ ಮಾರ್ಗದರ್ಶನದಲ್ಲಿ ಅಷ್ಟವಿಧ ಅರ್ಚನೆಯೊಂದಿಗೆ, ಪದ್ಮಪ್ರಿಯ, ಋದ್ಧಿ ಕೇರ ಅವರ ಮಂತ್ರಪಠಣದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
ವಿಶೇಷ ಗೌರವ ಹಸ್ತಾಂತರ
ಮಹಾಕವಿ ರತ್ನಾಕರವರ್ಣಿ ಪ್ರಶಸ್ತಿ ಪುರಸ್ಕೃತರಾದ ನೇರಂಕಿ ಪಾರ್ಶ್ವನಾಥ, ಸುಧಾ ಪಾರ್ಶ್ವನಾಥ ದಂಪತಿಯನ್ನು ವಿಶೇಷ ಗೌರವ ಪುರಸ್ಕಾರಗಳೊಂದಿಗೆ ಅಭಿನಂದಿಸಲಾಯಿತು. ವಿದ್ಯಾರ್ಥಿನಿ ಶ್ರೇಯಾ ಪ್ರಕಾಶ್ ನೀಲಗೌಡರ್ ಅವರನ್ನು ಗೌರವಿಸಲಾಯಿತು. ಭಾರತೀಯ ಅಂಚೆ ಇಲಾಖೆ ದಿನದ ಪ್ರಯುಕ್ತ ವಿಶ್ವನಮೋಕಾರ ಮಂತ್ರ ದಿನದ ಪ್ರಯುಕ್ತ ಎಕ್ಸಲೆಂಟ್ ಸಂಸ್ಥೆಗೆ ವಿಶೇಷ ಗೌರವವನ್ನು ಸಂಸ್ಥೆಯ ಗೌರವಾಧ್ಯಕ್ಷ ಅಭಯಚಂದ್ರ ಜೈನ್ ಹಾಗೂ ಅಧ್ಯಕ್ಷ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್ ಅವರಿಗೆ ಹಸ್ತಾಂತರಿಸಲಾಯಿತು.
ಸರಳ ಜೀವನ ಶ್ರೇಷ್ಠ ಜೀವನ. ಸರಳ ಜೀವನ ಘನತೆ, ಗೌರವ ಎಲ್ಲವನ್ನು ತಂದುಕೊಡುತ್ತದೆ. ಭಾರತೀಯತೆ, ರಾಷ್ತ್ರೀಯ ಚಿಂತನೆಗಳೊಂದಿಗೆ ಸರಳ ಬದುಕು ನಮ್ಮದಾಗಲಿ. ಕೆ.ಅಭಯಚಂದ್ರ ಜೈನ್, ಮಾಜಿ ಸಚಿವ https://www.vijayavani.net/polali-jathre-rathotsava https://www.vijayavani.net/bappanadu-jathre