

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾಷಷ್ಠಿ ಜಾತ್ರೋತ್ಸವದ ಪ್ರಧಾನ ಅಂಗವಾದ ಮಹಾರಥೋತ್ಸವಕ್ಕೆ ಸಕಲ ಸಿದ್ಧತೆಯನ್ನು ದೇವಳದ ವತಿಯಿಂದ ಮಾಡಲಾಗಿದೆ. ಭಕ್ತರ ಸರಾಗ ಓಡಾಟಕ್ಕೆ ಅನುಕೂಲವಾಗುವಂತೆ ಕಬ್ಬಿಣದ ತಡೆಬೇಲಿ ನಿರ್ಮಾಣವಾಗಿದ್ದು, ನೂತನ ಅನ್ನಛತ್ರ ಅಂಗಡಿಗುಡ್ಡೆಯಲ್ಲಿ ನಿರ್ಮಾಣವಾಗಿದೆ.
ಭಕ್ತರಿಗೆ ವಿಶ್ರಾಂತಿಗಾಗಿ ಮೂರು ಕಡೆ ವಿಶ್ರಾಂತಿಧಾಮ ನಿರ್ಮಿಸಲಾಗಿದೆ. ದೇವಳದ ವತಿಯಿಂದ ಪಂಚಮಿ ಮತ್ತು ಷಷ್ಠಿಯಂದು 6 ಅಟೋಗಳು ಭಕ್ತರನ್ನು ಕುಮಾರಧಾರಾದಿಂದ ಕಾಶಿಕಟ್ಟೆ ತನಕ ಕರೆತರಲಿವೆ. ಕುಲ್ಕುಂದ ವಿಷ್ಣುಮೂರ್ತಿ ದೈವಸ್ಥಾನದ ಮುಂಭಾಗದ ಆಶ್ರಯ ವಸತಿಗೃಹದ ಸ್ಥಳದಲ್ಲಿ ಭಾರಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಂದ ಕುಮಾರಸ್ವಾಮಿ ವಿದ್ಯಾಲಯದ 2 ಮಿನಿ ಬಸ್ಗಳು ಭಕ್ತರನ್ನು ಉಚಿತವಾಗಿ ಕರೆದುತರಲಿವೆ. ಆಡಳಿತಾಧಿಕಾರಿ ಜುಬಿನ್ ಮೊಹಾಪಾತ್ರ ಮತ್ತು ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ವಿಶೇಷ ವ್ಯವಸ್ಥೆ ಮಾಡಿದ್ದಾರೆ. ಎಇಒ ಯೇಸುರಾಜ್ ಮತ್ತು ಅಭಿಯಂತ ಉದಯ ಕುಮಾರ್ ಮಾರ್ಗದರ್ಶನ ನೀಡುತ್ತಿದ್ದಾರೆ.
ಕಬ್ಬಿಣದ ತಡೆ ಬೇಲಿ: ಮಹಾರಥೋತ್ಸವದ ಸಂದರ್ಭ ಭಕ್ತರ ವಿಪರೀತ ಸಂದಣಿಯಿರುತ್ತದೆ. ಹಿಂದೆ ಹಗ್ಗದ ಬೇಲಿ ಕಟ್ಟಿ ಜನರನ್ನು ನಿಯಂತ್ರಿಸಲಾಗುತ್ತಿತ್ತು. ಈ ಸಲ 20 ಅಡಿ ಉದ್ದ ಹಾಗೂ 4 ಅಡಿ ಎತ್ತರದ ಬಲಿಷ್ಠ ಕಬ್ಬಿಣದ ತಡೆಬೇಲಿ ನಿರ್ಮಿಸಲಾಗಿದೆ. ಇದನ್ನು ಮಹಾರಥದ ಬಳಿಯಿಂದ ರಥಬೀದಿ ವೃತ್ತದ ತನಕ ಅಳವಡಿಸಲಾಗುವುದು. ರಥ ಎಳೆಯಲು, ಬ್ರಹ್ಮರಥೋತ್ಸವದ ಸೇವಾರ್ಥಿಗಳಿಗೆ ವಿಶೇಷ ಪಾಸ್ ನೀಡಲಾಗುವುದು.
ರಥಕ್ಕೆ ತಿರುಗಣೆ: ಪಂಚಮಿ ರಥವನ್ನು ರಥಬೀದಿ ವೃತ್ತದ ಬಳಿ ತಿರುಗಿಸಲು ಯಾಂತ್ರಿಕೃತವಾದ ನೂತನ ತಿರುಗಣೆ ಅಳವಡಿಸಲಾಗಿದೆ. ಹಿಂದೆ ವೃತ್ತದ ಬಳಿ ನಿಲ್ಲಿಸಿ ಅದಕ್ಕೆ ಜಾಕ್ ಅಳವಡಿಸಿ ತಿರುಗಿಸಬೇಕಿತ್ತು. ಇದೀಗ ಸ್ಟೇರಿಂಗ್ ಮಾದರಿಯ ಯಂತ್ರ ಅಳವಡಿಸಿದ ಕಾರಣ ರಥವು ತಡೆರಹಿತವಾಗಿ ಚಲಿಸಲಿದೆ.
ಉಚಿತ ಆಟೋ ವ್ಯವಸ್ಥೆ: ಕುಮಾರಧಾರಾದಿಂದ ಕಾಶಿಕಟ್ಟೆ ತನಕ ಉಚಿತ ಆಟೋ ವ್ಯವಸ್ಥೆ ಇದೆ. ದೇವಳದಿಂದ 6 ಆಟೋಗಳನ್ನು ಇದಕ್ಕಾಗಿ ಗುರುತಿಸಲಾಗಿದೆ. ಪಂಚಮಿ ಮತ್ತು ಷಷ್ಠಿಯ ದಿನ ಕುಮಾರಧಾರಾದಿಂದ ಕಾಶಿಕಟ್ಟೆ ತನಕ ಮತ್ತು ಸುಳ್ಯ ರಸ್ತೆಯ ಇಂಜಾಡಿ ಸೇತುವೆ ತನಕ ಉಚಿತ ಆಟೋ ವ್ಯವಸ್ಥೆಯನ್ನು ದೇವಳದ ಆಡಳಿತ ಮಾಡಿದೆ.
ಅನ್ನಪೂರ್ಣ ಛತ್ರ: ದೇವಳದ ಸಮೀಪದ ಅಂಗಡಿಗುಡ್ಡೆಯಲ್ಲಿ ವಿಶೇಷ ಭೋಜನ ಛತ್ರ ನಿರ್ಮಿಸಲಾಗಿದೆ. ಇಲ್ಲಿ 4 ಕೌಂಟರ್ನಲ್ಲಿ ಭಕ್ತರು ಬಫೆ ಮಾದರಿಯಲ್ಲಿ ಪ್ರಸಾದ ಭೋಜನ ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿದೆ. ಇಲ್ಲಿಗೆ ಬರಲು ಮತ್ತು ತೆರಳಲು ರಸ್ತೆ ವ್ಯವಸ್ಥೆ ಮಾಡಲಾಗಿದೆ. ಷಣ್ಮುಖ ಪ್ರಸಾದ, ಆದಿ ಸುಬ್ರಹ್ಮಣ್ಯ ಭೋಜನಶಾಲೆ, ಗಣಪತಿ ದೇವಸ್ಥಾನ ಮತ್ತು ಶೃಂಗೇರಿ ಮಠದಲ್ಲಿ ಪ್ರಸಾದ ಭೋಜನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಸ್ವಚ್ಛತಾ ಜಾಗೃತಿ: ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದ್ದು, ಜಾಗೃತಿ ಫಲಕವನ್ನು ಕ್ಷೇತ್ರಾದ್ಯಂತ ಅಲ್ಲಲ್ಲಿ ಅಳವಡಿಸಲಾಗಿದೆ. ಕುಮಾರಧಾರಾದಿಂದ ಗೋಪುರದ ತನಕ ರಸ್ತೆಯನ್ನು ಗುಡಿಸಿ ಶುಚಿ ಮಾಡಲಾಗುತ್ತಿದೆ. ಅಲ್ಲಲ್ಲಿ ಮೊಬೈಲ್ ಶೌಚಗೃಹಗಳು, ಕುಡಿಯುವ ನೀರಿನ ವ್ಯವಸ್ಥೆ, ರಥಬೀದಿಯಲ್ಲಿ ತುರ್ತು ಚಿಕಿತ್ಸಾ ಘಟಕ, ಪೊಲೀಸ್ ಚೌಕಿ ಮಾಡಲಾಗಿದೆ. ಧ್ವನಿವರ್ಧಕದ ಮಾಹಿತಿ ನೀಡಲು ವ್ಯವಸ್ಥೆ ಮಾಡಲಾಗಿದೆ.
ಚಂಪಾಷಷ್ಠಿ ಜಾತ್ರೋತ್ಸವಕ್ಕೆ ಬರುವ ಭಕ್ತರಿಗೆ ಭೋಜನ ಪ್ರಸಾದ ಸ್ವೀಕರಿಸಲು ಅನುಕೂಲವಾಗಲು ಅಂಗಡಿಗುಡ್ಡೆಯಲ್ಲಿ ವಿಶೇಷ ಭೋಜನಾಲಯ ನಿರ್ಮಿಸಲಾಗಿದೆ. ವಿಶ್ರಾಂತಿ ಪಡೆಯಲು ವಿಶ್ರಾಂತಿ ಧಾಮ ನಿರ್ಮಿಸಲಾಗಿದೆ. ಸೂಕ್ತ ಮಾಹಿತಿ ಒದಗಿಸಲು ವ್ಯವಸ್ಥೆ ಮಾಡಲಾಗಿದೆ. ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಗಮನ ಕೊಡಲಾಗುವುದು. ಇದಕ್ಕಾಗಿ ಕ್ಷೇತ್ರಾದ್ಯಂತ ಅಲ್ಲಲ್ಲಿ ಮಾಹಿತಿ ಫಲಕ ಅಳವಡಿಸಲಾಗಿದೆ. ಜಾತ್ರೆಗೆ ಆಗಮಿಸುವ ಭಕ್ತರಿಗೆ ಯಾವುದೇ ಸಮಸ್ಯೆ ಆಗದಂತೆ ಕ್ರಮವಹಿಸಲು ಹೆಚ್ಚಿನ ಒತ್ತು ನೀಡಲಾಗಿದೆ. ಜುಬಿನ್ ಮೊಹಪಾತ್ರ, ಆಡಳಿತಾಧಿಕಾರಿ ಮಹಾರಥೋತ್ಸವ ಸಂದರ್ಭ ಭಕ್ತರ ಸಂದಣಿ ನಿಯಂತ್ರಣಕ್ಕೆ ಕಬ್ಬಿಣದ ವಿಶೇಷ ತಡೆಬೇಲಿ ನಿರ್ಮಿಸಲಾಗಿದೆ. ಭಕ್ತರಿಗೆ ಅನುಕೂಲವಾಗಲು ರಥಬೀದಿಯಲ್ಲಿ ತುರ್ತು ಚಿಕಿತ್ಸಾ ಘಟಕ ತೆರೆಯಲಾಗುವುದು. ಭಕ್ತರ ಉಪಯೋಗಕ್ಕಾಗಿ ಉಚಿತ ಆಟೋ ಸೇವೆಯನ್ನು ಶ್ರೀ ದೇವಳದಿಂದ ಮಾಡಲಾಗಿದೆ. ಅರವಿಂದ ಅಯ್ಯಪ್ಪ ಸುತಗುಂಡಿ, ಕಾರ್ಯನಿರ್ವಹಣಾಧಿಕಾರಿ