

ಮುಂಬೈ: ಮಹಾರಾಷ್ಟ್ರದ(Maharashtra) ರಾಜಧಾನಿಯಿಂದ 58 ಕಿಲೋಮೀಟರ್ ದೂರದಲ್ಲಿರುವ ನಲ್ಲಸೊಪಾರ ಎಂಬ ಪಟ್ಟಣದಲ್ಲಿ ವಿದ್ಯಾರ್ಥಿನಿಗೆ ಥಳಿಸಿ ಟ್ಯೂಷನ್ ಟೀಚರ್ ಬಾಲಕಿಯ ಜೀವಕ್ಕೆ ಅಪಾಯ ತಂದೊಡ್ಡಿರುವ ಘಟನೆ ಬೆಳಕಿಗೆ ಬಂದಿದೆ. ಶಿಕ್ಷಕಿ ವಿದ್ಯಾರ್ಥಿನಿಯ ಕಿವಿಯ ಕೆಳಗೆ ಎರಡು ಬಾರಿ ಕಪಾಳಮೋಕ್ಷ ಮಾಡಿದ್ದರಿಂದ ಆಕೆ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ. ಈ ಅಮಾನವೀಯ ಘಟನೆ ಅಕ್ಟೋಬರ್ 5ರಂದು ನಡೆದಿದೆ.
ಬಾಲಕಿಯ ಮೆದುಳಿಗೆ ತೀವ್ರ ಪೆಟ್ಟಾಗಿದ್ದು, ಅಂದಿನಿಂದ ವಿದ್ಯಾರ್ಥಿನಿ ಪ್ರಾಣಾಪಾಯದಲ್ಲಿ ಸಿಲುಕಿದ್ದಾಳೆ. ಶಿಕ್ಷಕಿ ಆಕೆಯನ್ನು ಹೊಡೆದ ಒಂದು ವಾರದ ನಂತರ ಹುಡುಗಿಯ ಆರೋಗ್ಯ ಕ್ರಮೇಣ ಹದಗೆಟ್ಟಿತು. ಒಂದು ವಾರದ ನಂತರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
20 ವರ್ಷದ ಖಾಸಗಿ ಟ್ಯೂಷನ್ ಶಿಕ್ಷಕಿ ರತ್ನಾ ಸಿಂಗ್, ತರಗತಿಯಲ್ಲಿ ಚೇಷ್ಟೆ ಮಾಡುತ್ತಿದ್ದಳು ಎಂಬ ಕಾರಣಕ್ಕೆ ಹುಡುಗಿಯ ಕೆನ್ನೆಗೆ ಬಾರಿಸಿದ್ದಾಳೆ. ಎಷ್ಟು ಜೋರಾಗಿ ಕೆನ್ನೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದರೆ ಬಾಲಕಿಯ ಕಿವಿಯೋಲೆ ಕೆನ್ನೆಗೆ ಚುಚ್ಚಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಂಬತ್ತು ವರ್ಷದ ಬಾಲಕಿಯನ್ನು ಮುಂಬೈನ ಸೋಮಯ್ಯ ಆಸ್ಪತ್ರೆಯಲ್ಲಿ ತೀವ್ರ ನಿಗಾಘಟಕದಲ್ಲಿ ದಾಖಲಿಸಲಾಗಿದೆ. ತೀವ್ರತರವಾದ ಮಿದುಳಿನ ಗಾಯ, ದವಡೆ ಮತ್ತು ಕುತ್ತಿಗೆಯ ಬಿಗಿತ, ಟೆಟನಸ್(ಧನುರ್ವಾಯು) ಸೋಂಕಿನಿಂದ ಬಳಲುತ್ತಿದ್ದಾರೆ. ಅವರು ಕಳೆದ ಒಂಬತ್ತು ದಿನಗಳಿಂದ ವೆಂಟಿಲೇಟರ್‌ನಲ್ಲಿದ್ದಾರೆ ಮತ್ತು ಅವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
ಬಾಲಕಿಯ ಪಾಲಕರು ನೀಡಿದ ದೂರಿನ ಆಧಾರದ ಮೇಲೆ ಟೀಚರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ವಿಚಾರಣೆಗಾಗಿ ನೋಟಿಸ್ ಕಳುಹಿಸಲಾಗಿದೆ. ತನಿಖೆ ನಡೆಸಿ ವೈದ್ಯರ ವಿವರವಾದ ಅಭಿಪ್ರಾಯದ ನಂತರ ಆರೋಪಪಟ್ಟಿ ಮಾಡುವ ಬಗ್ಗೆ ನಿರ್ಧರಿಸುತ್ತೇವೆ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)