

ಮುಂಬೈ: ಟಿ20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಶುಕ್ರವಾರ 11 ಕೋಟಿ ರೂಪಾಯಿ ನಗದು ಬಹುಮಾನ ಘೋಷಣೆ ಮಾಡಿದರು.
ಇದನ್ನೂ ಓದಿ: ರಾಜ್ಯ ಬಿಜೆಪಿಗೆ ಉಸ್ತುವಾರಿ, ಸಹ ಉಸ್ತುವಾರಿ ನೇಮಕ
ಶುಕ್ರವಾರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ತಂಡದ ಸದ್ಯಸರಾಗಿದ್ದ ಮುಂಬೈನ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಶಿವಂ ದುಬೆ ಮತ್ತು ಯಶಸ್ವಿ ಜೈಸ್ವಾಲ್ ಅವರಿಗೆ ವಿಧಾನ ಭವನದ ಸೆಂಟ್ರಲ್ ಹಾಲ್‌ನಲ್ಲಿ (ರಾಜ್ಯ ಶಾಸಕಾಂಗ ಸಂಕೀರ್ಣ) ಸನ್ಮಾನಿಸಿ, ಗಣೇಶನ ವಿಗ್ರಹವನ್ನು ಸ್ಮರಣಿಕೆಯಾಗಿ ನೀಡಿದರು. ಬಳಿಕ ಈ ಘೋಷಣೆ ಮಾಡಿದರು. ಈ ವೇಳೆ ಕೆಲ ಕಾಲ ಆಟಗಾರರೊಂದಿಗೆ ಮಾತುಕತೆ ನಡೆಸಿ ಟಿ20 ವಿಶ್ವಕಪ್ನ ಅನುಭವಗಳನ್ನು ಆಲಿಸಿದರು.
ವಿಶ್ವಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧದ ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರ ಗಮನಾರ್ಹ ಕ್ಯಾಚ್ ಅನ್ನು ಅವರು ವಿಶೇಷವಾಗಿ ಶ್ಲಾಘಿಸಿದರು.
ಸಹಾಯಕ ಸಿಬ್ಬಂದಿಯಾಗಿದ್ದ ಪರಸ್ ಮಾಂಬ್ರೆ ಮತ್ತು ಅರುಣ್ ಕಾನಡೆ ಅವರನ್ನು ಸಿಎಂ ಶಿಂದೆ ಅಭಿನಂದಿಸಿ ಅವರನ್ನು ಹಾಡಿ ಹೊಗಳಿದರು. ಗುರುವಾರ ದಕ್ಷಿಣ ಮುಂಬೈನಲ್ಲಿ ತಂಡದ ವಿಜಯೋತ್ಸವ ಮೆರವಣಿಗೆಯಲ್ಲಿ ಜನದಟ್ಟನೆಯನ್ನು ನಿಭಾಯಿಸಿದ ಪೊಲೀಸರನ್ನು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಶ್ಲಾಘಿಸಿದರು.