

ಉಡುಪಿ: ಭಾರತವು ಸಮರ್ಥ, ಸಮೃದ್ಧ, ಸ್ವಾಭಿಮಾನಿ, ಶಕ್ತಿಶಾಲಿ ದೇಶವಾಗಿ ರೂಪುಗೊಳ್ಳಬೇಕೆಂಬುವುದು ದೇಶದ ಕೋಟ್ಯಾಂತರ ಜನರ ಹಲವಾರು ವರ್ಷಗಳ ಕನಸಾಗಿತ್ತು. ಆ ಕನಸನ್ನು ಪ್ರಧಾನಿ ನರೇಂದ್ರ ಮೋದಿಯವರು ಈಡೇರಿಸಿದ್ದಾರೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಮಹಾಲಕ್ಷ್ಮಿ ಕೋ-ಆಪರೇಟಿವ್ ಬ್ಯಾಂಕ್ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 75ನೇ ಹುಟ್ಟು ಹಬ್ಬದ ಅಂಗವಾಗಿ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ಆಯೋಜಿಸಿದ “ನಾ ಕಂಡಂತೆ ಪ್ರಧಾನಿ ನರೇಂದ್ರ ಮೋದಿ” ವಿಷಯದ ಕುರಿತ ಪ್ರಬಂಧ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಇಂದು ಭಾರತ ದೇಶವು ಜನಗತ್ತಿನ ನೂರಕ್ಕೂ ಹೆಚ್ಚಿನ ದೇಶಗಳಿಗೆ ಸಾಲ ಕೊಡುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ಪ್ರಧಾನಿ ಮೋದಿಯವರ ಸಮರ್ಥ ನಾಯಕತ್ವದಿಂದಲೇ ಇದು ಸಾಧ್ಯವಾಗಿದೆ ಎಂದರು.
ಮಂಗಳೂರು ಸಂಸದ ಬ್ರಿಜೇಶ್ ಚೌಟ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಯೊಬ್ಬರ ಜೀವನದಲ್ಲಿ ತಲುಪಿರುವ ಮಹಾನ್ ನಾಯಕ. ಅವರು ಜನಮಾನಸದಲ್ಲಿ ನೆಲೆ ನಿಂತಿರುವ ಅದ್ಭುತ ಪ್ರಧಾನ ಮಂತ್ರಿಯಾಗಿದ್ದಾರೆ. ಆಡಳಿತ ನಡೆಸುವ ರೀತಿಯನ್ನು ಬದಲಾಯಿಸಿದ್ದಾರೆ ಎಂದರು.
ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಗುರುರಾಜ್ ಗಂಟಿಹೊಳೆ, ಕಿರಣ್ ಕುಮಾರ್ ಕೊಡ್ಗಿ, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾ ಗಣೇಶ್ ಕಾರ್ಣಿಕ್ ಮೊದಲಾದವರು ಉಪಸ್ಥಿತರಿದ್ದರು.