Mahagathbandhan | ನಿಮ್ಮ ಅಭ್ಯರ್ಥಿಗಳನ್ನು ಹಿಂತೆಗೆದುಕೊಳ್ಳಿ.. ಮೈತ್ರಿ ಧರ್ಮ ಪಾಲಿಸಿ..ಲಾಲೂಗೆ ಸಂಸದ ಪಪ್ಪು ಯಾದವ್​ ಮನವಿ

Untitled design - 2025-10-19T154933.300
Published on

Delhi: ಈಗಾಗಲೇ ಮಿತ್ರಪಕ್ಷಗಳಿಗೆ ಹಂಚಿಕೆ ಮಾಡಿರುವ ಸ್ಥಾನಗಳಿಂದ ಅಭ್ಯರ್ಥಿಗಳನ್ನು ಹಿಂತೆಗೆದುಕೊಳ್ಳುವ ಮೂಲಕ ಮಹಾಘಟಬಂದನ್(Mahagathbandhan)​ ನಲ್ಲಿನ​ ಶಿಸ್ತನ್ನು ಎತ್ತಿಹಿಡಿಯುವಂತೆ ಕಾಂಗ್ರೆಸ್ ಬೆಂಬಲಿತ ಸಂಸದ ಪಪ್ಪು ಯಾದವ್, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್​ರನ್ನು ಒತ್ತಾಯಿಸಿದ್ದಾರೆ.

ಚುನಾವಣೆಯ ಈ ಸಂದರ್ಭದಲ್ಲಿ ಯಾವುದೇ ಬೆಲೆ ತೆತ್ತಾದರೂ ಸರಿ ಮೈತ್ರಿ ಧರ್ಮವನ್ನು ಪಾಲಿಸಬೇಕು ಮತ್ತು ಇಂಡಿಯಾ ಕೂಟದೊಳಗೆ ಸಾಮರಸ್ಯವನ್ನು ಕಾಪಾಡಿಕೊಳ್ಳಲು ನೇತೃತ್ವ ವಹಿಸಿಕೊಳ್ಳುವಂತೆ ಲಾಲು ಪ್ರಸಾವ್​​ರನ್ನು ಮನವಿ ಮಾಡಿದರು.

ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಇಂಡಿಯಾ ಬಣದ ಹಿತದೃಷ್ಟಿಯಿಂದ ಕೆಲಸ ಮಾಡುವಂತೆ ಎಲ್ಲಾ ಪಕ್ಷಗಳಿಗೆ ಮನವಿ ಮಾಡಿದ್ದಾರೆ. ಆರ್‌ಜೆಡಿ ಅಭ್ಯರ್ಥಿ ಇರುವಲ್ಲಿ ನಾವು ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಆದ್ದರಿಂದ, ನಮ್ಮ ಅಭ್ಯರ್ಥಿ ಇರುವ ಸ್ಥಾನಗಳಿಂದ ಆರ್‌ಜೆಡಿ ತನ್ನ ಅಭ್ಯರ್ಥಿಗಳನ್ನು ಹಿಂತೆಗೆದುಕೊಳ್ಳಬೇಕು. ಜನರು ನಮಗೆ ಬೆಂಬಲವಾಗಿದ್ದು, ಮೈತ್ರಿಕೂಟ ಮತ್ತು ರಾಹುಲ್ ಗಾಂಧಿಗೆ ತಮ್ಮ ಮತವನ್ನು ನೀಡುತ್ತಾರೆ, ಇಂತಹ ಸಂದರ್ಭದಲ್ಲಿ ಆಂತರಿಕ ಘರ್ಷಣೆಗಳು ಎಲ್ಲರಿಗೂ ಹಾನಿಯನ್ನುಂಟುಮಾಡುತ್ತವೆ ಎಂದು ಹೇಳಿದರು.

ಮಹಾಘಟಬಂಧನ್‌ನಲ್ಲಿ ಸೀಟು ಹಂಚಿಕೆ ವಿವಾದಗಳು ದಿನೇ ದಿನೇ ಜಟಿಲವಾಗುತ್ತಿರುವ ಹಿನ್ನೆಲೆಯಲ್ಲಿ, ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಪಪ್ಪು ಯಾದವ್ ಈ ಹೇಳಿಕೆ ಬಂದಿದೆ. ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ಮೈತ್ರಿ ಪಕ್ಷಗಳ ಅಭ್ಯರ್ಥಿಗಳ ನಡುವೆ ಅನೇಕ ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಯುತ್ತಿರುವುದು ಮೈತ್ರಿಕೂಟದಲ್ಲಿ ಬಿರುಕು ಉಲ್ಬಣವಾಗುತ್ತಿರುವುದನ್ನು ಬಹಿರಂಗಪಡಿಸಿದೆ.

ಈಗಾಗಲೇ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಲಾಲು ಪ್ರಸಾದ್ ಯಾದವ್ ಸೇರಿದಂತೆ ಅನೇಕ ಹಿರಿಯ ನಾಯಕರು ಈ ಸಂಘರ್ಷದಲ್ಲಿ ಮಧ್ಯಪ್ರವೇಶಿಸಿ, ಮಿತ್ರಪಕ್ಷಗಳ ನಡುವಿನ ಈ ಬಿಕ್ಕಟ್ಟನ್ನು ಪರಿಹರಿಸಲು ಮತ್ತು ಒಗ್ಗಟ್ಟಾಗಿ ಹೋಗಲು ವೇದಿಕೆ ಸಿದ್ಧಪಡಿಸುವ ಪ್ರಯತ್ನದಲ್ಲಿದ್ದಾರೆ ಎಂದು ವರದಿಯಾಗಿದೆ. ಈ ನಡುವೆ ಮುಸ್ಲಿಮರು ದೇಶದ್ರೋಹಿಗಳು (ನಮಕ್ ಹರಾಮ್)" ಎಂಬ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರ ವಿವಾದಾತ್ಮಕ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಪಪ್ಪು ಯಾದವ್, ನಿಜವಾದ ದೇಶದ್ರೋಹಿಗಳು ಯಾರು ಎಂದು ಎಲ್ಲರಿಗೂ ತಿಳಿದಿದೆ. ಬ್ರಿಟಿಷ್ ಆಳ್ವಿಕೆಯಲ್ಲಿ, ಬ್ರಿಟಿಷರ ಪರವಾಗಿ ನಿಂತವರೇ ನಿಜವಾದ ನಮಕ್ ಹರಾಮ್ ಆಗಿದ್ದರು ಎಂದು ಹೇಳಿದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net