

ಸ್ತ್ರೀ ಪಾತ್ರದಲ್ಲಿ ಮಹದೇವ ಹೊಸೂರು ಎತ್ತಿದ ಕೈ. ಅವರ ಯಥಾವತ್ ಅಭಿನಯಕ್ಕೆ ರಂಗರಸಿಕರು ಮಹದೇವಿ ಎಂತಲೇ ಕರೆಯುತ್ತಾರೆ. ಹಲವು ಪ್ರಶಸ್ತಿ ಮನ್ನಣೆಗಳು ಮಹದೇವ ಹೊಸೂರರಿಗೆ ಲಭಿಸಿವೆ.
ಸ್ತ್ರೀ ಪಾತ್ರಗಳಲ್ಲಿ ಸ್ತ್ರೀಯರಿಗಿಂತ ಮಿಗಿಲಾಗಿ ಅಭಿನಯಿಸುವ ಹಾಲಿ ದಂತಕಥೆ ಮಹದೇವ ಹೊಸೂರು. ಇವರು ಪುರುಷರಲ್ಲ, ಸ್ತ್ರೀ ಎಂದು ಪಣಕಟ್ಟಿದ ಉದಾಹರಣೆಗಳು ಅನೇಕ ಇವೆ. ಅಂತಹ ಅಪ್ಪಟ ಅಭಿನಯ ಮಹದೇವ ಅಲಿಯಾಸ್ ಮಹದೇವಿ ಅವರದು. ಕೆಲವರು ಅವರನ್ನು ಮಹದೇವ ಎಂದರೆ, ಮತ್ತೆ ಕೆಲವರು ಮಹದೇವಿ ಎನ್ನುತ್ತಾರೆ. ಇದೀಗ ಗವಾಯಿಗಳ ನಾಟಕ ಕಂಪನಿಯ ಪ್ರಖ್ಯಾತ ನಟ- ಅಲ್ಲಲ್ಲ ನಟಿ ಅವರು. ಬಾಲ್ಯದಿಂದಲೇ ಮಹಿಳೆಯರ ನಡೆನುಡಿಯನ್ನು ಸೂಕ್ಷ್ಮವಾಗಿ ಗಮನಿಸುತ್ತ ಬಂದ ಮಹದೇವಗೆ ಸ್ತ್ರೀ ಆವಾಹನೆ ಆಗಿಬಿಟ್ಟಿದ್ದಾಳೆ.
ಜಮಖಂಡಿ ತಾಲ್ಲೂಕು ಹೊಸೂರು (ಈಗ ಬನಹಟ್ಟಿ ತಾಲ್ಲೂಕಿಗೆ ಸೇರಿದೆ) ಕೃಷಿಕ ಮಲ್ಲಪ್ಪ- ಸುವರ್ಣ ದಂಪತಿಗೆ 1983 ರಲ್ಲಿ ಜನಿಸಿದ ಮಹದೇವ- ತಮ್ಮ ತಾಯಿ ಸೀರೆ ಉಡುವುದನ್ನು, ಓಣಿಯ ಹೆಣ್ಮಕ್ಕಳ ಹಾವಭಾವವನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಬೆಳೆದವರು- ಅಷ್ಟೇ ಅಲ್ಲ. ಅದನ್ನು ಆವಾಹಿಸಿಕೊಂಡವರು. ಸ್ತ್ರೀಯಾಗಿ ಅಭಿನಯಿಸಿ ತೋರಿಸಿದಾಗ ಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನೃತ್ಯ ಮಾಡಲು ಹೇಳಿದರು. ನಾಟಕದಲ್ಲಿ ಸ್ತ್ರೀ ಪಾತ್ರ ನೀಡಿದರು. ಬಾಲಕ ಮಹದೇವ ಅಚ್ಚುಕಟ್ಟಾಗಿ ಮಾಡಿದ.
ತಮ್ಮೂರಿನ ಕಲ್ಲಪ್ಪ ತೇಲಿ ಎಂಬುವರು ರೇಣುಕಾದೇವಿ ನಾಟ್ಯ ಸಂಘ ಸ್ಥಾಪಿಸಿ ಜಂಗಮರ ಜೋಳಿಗೆ ಎಂಬ ಪೌರಾಣಿಕ- ಸಾಮಾಜಿಕ ನಾಟಕ ಪ್ರದರ್ಶಿಸಿದಾಗ ಮಹದೇವರ ಅಭಿನಯ ಜನರ ಮೆಚ್ಚುಗೆ ಪಡೆಯಿತು. ಸುತ್ತಲ ನಾಲ್ಕಾರು ಊರುಗಳಲ್ಲಿ ನಾಟಕ ಪ್ರದರ್ಶನ ಕಂಡಿತು. ಈ ಹುಡುಗ ಎಷ್ಟು ಚಂದ ಹೆಣ್ಣುಪಾತ್ರ ಮಾಡತೈತಿ... ಅಂತ ಸಮೀಪದ ಹಳ್ಳಿಯ ಜನ ತಮ್ಮೂರಿನ ನಾಟಕದ ಸ್ತ್ರೀಪಾತ್ರಕ್ಕೆ ಆಹ್ವಾನಿಸಿದರು. ನಾಟಕಗಳು ಯಶಸ್ವಿಯಾದವು. ಡಾ.ಪುಟ್ಟರಾಜ ಗವಾಯಿಗಳ ನಾಟಕ ಕಂಪನಿಯಲ್ಲಿ ಸ್ತ್ರೀಯರಿಗೆ ಪ್ರವೇಶ ಇಲ್ಲ! ಪುರುಷರೇ ಸ್ತ್ರೀ ಪಾತ್ರ ಮಾಡುತ್ತಾರೆ. ಗವಾಯಿಗಳ ಕಂಪನಿಗೆ ಸರಿಹೊಂದುವ ನಟ ಮಹದೇವ ಎಂದು ಭಾವಿಸಿದ ಬಾಬು ಸಾಲಹಳ್ಳಿ ಎಂಬುವರು ಕಂಪನಿ ಕುಷ್ಟಗಿ ಕ್ಯಾಂಪ್ ಮಾಡಿದಾಗ ಅಲ್ಲಿಗೆ ಕರೆದೊಯ್ದು ನಟನಾಗಿ ಸೇರಿಸಿದ್ದು 2001 ರಲ್ಲಿ. ಆ ಕಂಪನಿಯಲ್ಲಿ ನೃತ್ಯದಿಂದ ಆರಂಭಿಸಿ ಬಹುಬೇಗ ಬಡ್ತಿ ಪಡೆದರು. ಅದಾಗಲೇ ಆ ಕಂಪನಿಯ ನುರಿತ ಸ್ತ್ರೀ ಪಾತ್ರದ ನಟರಿಂದಲೂ ಕಲಿತರು. ಕೊರವಂಜಿ ನಾಟಕದಲ್ಲಿ ದೊಡ್ಡ ಪಾತ್ರವೇ ಸಿಕ್ಕಿತು. ಪಾತ್ರದಲ್ಲಿ ಸೈ ಎನಿಸಿಕೊಂಡರು. ಕಂಪನಿಯಲ್ಲಿದ್ದ ನಾಲ್ಕೈದು ಸ್ತ್ರೀ ಪಾತ್ರಧಾರಿ ನಟರಲ್ಲಿ ಆರಂಭದಲ್ಲಿ ಇವರೂ ಒಬ್ಬರೆನಿಸಿದರು. ಕೆಲವೇ ದಿನಗಳಲ್ಲಿ ಇವರೇ ನಂಬರ್ ಒನ್ ನಟ(ಟಿ) ಯಾದರು.
ಅಕ್ಕಮಹಾದೇವಿ, ಹೇಮರೆಡ್ಡಿ ಮಲ್ಲಮ್ಮ ಮುಂತಾದ ಪಾತ್ರ ಬಹುಬೇಗ ದೊರೆತವು. ಮುದುಕನ ಮದುವೆ ನಾಟಕದ ಕಲ್ಯಾಣಿ, ವರ ನೋಡಿ ಹೆಣ್ಣುಕೊಡು- ಶೈಲಾ, ಬಂಜೆತೊಟ್ಟಿಲು- ಸಾವಿತ್ರಿ, ರತ್ನಮಾಂಗಲ್ಯ- ಛಾಯಾ ಮುಂತಾದ ನಾಯಕಿ ಖಳನಾಯಕಿ ಪಾತ್ರಗಳಲ್ಲಿ ಹೆಚ್ಚು ಅಭಿನಯಿಸಿದರು. ಬಸ್ ಕಂಡಕ್ಟರ್ ನಾಟಕದ ಚೆನ್ನಿ, ಕಿವುಡ ಮಾಡಿದ ಕಿತಾಪತಿಯ ತಾಯವ್ವ ಮುಂತಾದ ಹಾಸ್ಯ ಪಾತ್ರಗಳಲ್ಲೂ ನಟಿಸಿ ಆಲ್ರೌಂಡರ್ ಆದರು. ಈ ಮಧ್ಯೆ ಮಹದೇವಗೆ ಮದುವೆಯಾಗಿ ಇಬ್ಬರು ಮಕ್ಕಳೂ ಇದ್ದಾರೆ.
ಇವರಿಗೆ ಹಳೆಯ ಕನ್ನಡ ಚಿತ್ರಗಳೆಂದರೆ ಬಲು ಇಷ್ಟ. ಸರೋಜಾದೇವಿ, ಲೀಲಾವತಿ ಪಾತ್ರಗಳನ್ನು ನೋಡಿ ನೋಡಿ ತಮ್ಮ ಪಾತ್ರದ ಅಂದ ಹೆಚ್ಚಿಸಿಕೊಂಡರು. ಈ ನಾಡಿನ ನಂಬರ್ಒನ್ ನಟಿಯಾದ ಬಳ್ಳಾರಿಯ ಸುಭದ್ರಮ್ಮ ಮನ್ಸೂರರ ದ್ರೌಪದಿ ಪಾತ್ರವನ್ನು ಎವೆಇಕ್ಕದೆ ನೋಡಿ ಅದನ್ನು ರೂಢಿಸಿಕೊಂಡರು. ಗವಾಯಿಗಳ ಕಂಪನಿಯಲ್ಲಿ ಬಿಡುವಿದ್ದಾಗ ಹಳ್ಳಿಗಳಲ್ಲಿ ಹೋಗಿ ರಕ್ತರಾತ್ರಿಯ ದೌಪದಿಯಾಗಿ ಅಭಿನಯಿಸಿ ಮನ್ಸೂರರ ನಂತರ ಇವರೇ ಎನಿಸಿಕೊಂಡರು. ಎಲಿವಾಳ ಸಿದ್ದಯ್ಯಸ್ವಾಮಿಯಂತಹ ದಂತಕತೆಯಿಂದಲೂ ಹೇಳಿಸಿಕೊಂಡರು. ಹೆಸರಾಂತ ನಟ ವರವಿ ಫಕೀರಪ್ಪ ಸೇರಿದಂತೆ ಹಲವು ಹಿರಿಯರು ಬೆನ್ನುತಟ್ಟಿ ಹರಸಿದರು.
ಸಂಗೀತಲೋಕದ ದಂತಕಥೆ ಡಾ.ಪುಟ್ಟರಾಜ ಗವಾಯಿಗಳು 1937ರಲ್ಲಿ ಸ್ಥಾಪಿಸಿದ ಶ್ರೀ ಕುಮಾರೇಶ್ವರ ಕೃಪಾಪೋಷಿತ ಪಂಡಿತ್ ಪಂಚಾಕ್ಷರ ಗವಾಯಿಗಳ ನಾಟ್ಯ ಸಂಘ, ಗದಗ ಯಕ್ಷಗಾನದ ಹಾಗೆ ಆರಂಭದಿಂದಲೂ ಮಹಿಳೆಯರನ್ನು ಒಳಗೆ ಬಿಟ್ಟುಕೊಂಡಿಲ್ಲ! ಗಂಡಸರೇ ಅಲ್ಲಿ ಹೆಣ್ಣು ಪಾತ್ರ ಮಾಡಿ ದೊಡ್ಡ ಹೆಸರು ಮಾಡಿದ್ದಾರೆ. ದಂತಕಥೆಯಾಗಿಬಿಟ್ಟಿದ್ದಾರೆ. ಇವರಲ್ಲಿ ಬಹುತೇಕ ಎಲ್ಲರಿಗೂ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವದ ಮನ್ನಣೆಗಳು ದೊರೆತಿವೆ. ಅಂತಹ ನಟರ ಸಾಲಿನಲ್ಲಿ ಎದ್ದುಕಾಣುವ ಹೆಸರು ಮಹದೇವ ಹೊಸೂರು.
| ಗುಡಿಹಳ್ಳಿ ನಾಗರಾಜ