ಲಾಕ್‌ಡೌನ್ ನಡುವೆಯೂ ಮುಂಬೈನಲ್ಲಿ ಐಪಿಎಲ್ ಪಂದ್ಯಗಳಿಗೆ ಅನುಮತಿ

ipl web
Published on

ಮುಂಬೈ: ಮಹಾರಾಷ್ಟ್ರದಲ್ಲಿ ರಾತ್ರಿ ಕಫ್ರ್ಯೂ ಮತ್ತು ವಾರಾಂತ್ಯ ಲಾಕ್‌ಡೌನ್ ಘೋಷಣೆಯಾಗಿರುವ ಹೊರತಾಗಿಯೂ ಏಪ್ರಿಲ್ 10ರಿಂದ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ 10 ಐಪಿಎಲ್ ಪಂದ್ಯಗಳಿಗೆ ಯಾವುದೇ ಅಡಚಣೆ ಇರುವುದಿಲ್ಲ. ಕೆಲ ನಿರ್ಬಂಧಗಳ ನಡುವೆ ಐಪಿಎಲ್ ಪಂದ್ಯಗಳನ್ನು ಮುಂಬೈನಲ್ಲಿ ನಿಗದಿಯಂತೆಯೇ ಆಯೋಜಿಸಬಹುದು ಎಂದು ಮಹಾರಾಷ್ಟ್ರ ಸರ್ಕಾರ ಸೋಮವಾರ ಸ್ಪಷ್ಟಪಡಿಸಿದೆ.

ಏಪ್ರಿಲ್ 10ರಂದು ಚೆನ್ನೈ ಸೂಪರ್‌ಕಿಂಗ್ಸ್-ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಮುಂಬೈನಲ್ಲಿ ಮೊದಲ ಪಂದ್ಯ ನಡೆಯಲಿದೆ. ಬಳಿಕ ಏಪ್ರಿಲ್ 12, 15, 16, 18, 19, 21, 22, 24 ಮತ್ತು 25ರಂದು ಪಂದ್ಯಗಳು ನಡೆಯಲಿವೆ. ವಾರಾಂತ್ಯದಲ್ಲಿ ಶುಕ್ರವಾರ 8ರಿಂದ ಸೋಮವಾರ 7 ಗಂಟೆಯವರೆಗೆ ಲಾಕ್‌ಡೌನ್ ಜಾರಿಯಲ್ಲಿದ್ದರೂ, ಮುಂದಿನ ಶನಿವಾರ ಮುಂಬೈನಲ್ಲಿ ನಿಗದಿಯಂತೆಯೇ ಐಪಿಎಲ್ ಪಂದ್ಯ ನಡೆಯಲಿದೆ ಎಂದು ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ಸ್ಪಷ್ಟಪಡಿಸಿದ್ದಾರೆ.

‘ಕೆಲ ನಿರ್ಬಂಧಗಳೊಂದಿಗೆ ಐಪಿಎಲ್ ಪಂದ್ಯಗಳಿಗೆ ಅನುಮತಿ ನೀಡಲಾಗಿದೆ. ಪ್ರೇಕ್ಷಕರಿಗೆ ಕ್ರೀಡಾಂಗಣದೊಳಗೆ ಪ್ರವೇಶ ನೀಡಲಾಗುವುದಿಲ್ಲ. ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಎಲ್ಲರೂ ಒಂದೇ ಕಡೆ ಐಸೋಲೇಷನ್ ಆಗಿರಬೇಕು. ಎಲ್ಲೂ ಜನಸಂದಣಿ ಆಗುವಂತಿಲ್ಲ’ ಎಂದು ಮಲಿಕ್ ತಿಳಿಸಿದ್ದಾರೆ.

ಕ್ರಿಕೆಟಿಗರಿಗೆ ವ್ಯಾಕ್ಸಿನೇಷನ್ ಇಲ್ಲ

ಐಪಿಎಲ್‌ನಲ್ಲಿ ಆಡುವ ಎಲ್ಲ ಆಟಗಾರರಿಗೆ ವ್ಯಾಕ್ಸಿನೇಷನ್ ಮಾಡುವಂತೆ ಬಿಸಿಸಿಐ ಮಾಡಿರುವ ಮನವಿಯನ್ನು ಮಹಾರಾಷ್ಟ್ರ ಸರ್ಕಾರ ಪುರಸ್ಕರಿಸಿಲ್ಲ. ಆದರೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಸದ್ಯ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೀಕರಣ ನಡೆಯುತ್ತಿದೆ. ಹೀಗಾಗಿ ಕೇಂದ್ರದಿಂದ ಹೊಸ ಮಾರ್ಗಸೂಚಿ ಬಾರದ ಹೊರತಾಗಿ ನಾವು ಕ್ರಿಕೆಟಿಗರಿಗೆ ಕರೊನಾ ಲಸಿಕೆ ನೀಡಲಾಗದು ಎಂದು ಸಚಿವ ನವಾಬ್ ಮಲಿಕ್ ತಿಳಿಸಿದ್ದಾರೆ.

ರಾತ್ರಿ 8ರ ನಂತರವೂ ಅಭ್ಯಾಸ

ರಾತ್ರಿ ಕಫ್ರ್ಯೂ ಹೊರತಾಗಿಯೂ ಐಪಿಎಲ್ ತಂಡಗಳಿಗೆ ರಾತ್ರಿ 8 ಗಂಟೆ ನಂತರವೂ ಅಭ್ಯಾಸ ನಡೆಸಲು ಮತ್ತು ಹೋಟೆಲ್‌ಗಳಿಗೆ ಪ್ರಯಾಣಿಸಲು ಮಹಾರಾಷ್ಟ್ರ ಸರ್ಕಾರ ಅನುಮತಿ ನೀಡಿದೆ. ಆದರೆ ರಾತ್ರಿ ಕಫ್ರ್ಯೂ ನಿಯಮದನ್ವಯ ಸಾರ್ವಜನಿಕರು ರಾತ್ರಿ 8ರಿಂದ ಬೆಳಗ್ಗೆ 7 ಗಂಟೆಯವರೆಗೆ ಓಡಾಟ ನಡೆಸಲು ಅನುಮತಿ ಇಲ್ಲ. ಭಾನುವಾರ ಮಹಾರಾಷ್ಟ್ರದಲ್ಲಿ 11 ಸಾವಿರಕ್ಕೂ ಅಧಿಕ ಕರೊನಾ ಪ್ರಕರಣ ದಾಖಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net