

ಉಡುಪಿ: ಹೊಸ ವಿಮರ್ಶೆಗೆ ತೆರೆದುಕೊಳ್ಳುವುದು ಆಚಾರ್ಯ ಮಧ್ವರ ಮೂಲ ಸಿದ್ಧಾಂತವಾಗಿದ್ದು, ಈ ಮೂಲಕ ಜ್ಞಾನಕ್ರಾಂತಿಗೆ ಕಾರಣರಾಗಿದ್ದಾರೆ. ಸಮಕಾಲೀನ ಚಿಂತನೆಯೊಂದಿಗೆ ಜ್ಞಾನ ಬೆಳೆಯಬೇಕು ಎಂಬುದು ದ್ವೆ$$ೃತ ಸಿದ್ಧಾಂತದ ಆಶಯ ಎಂದು ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ರಾಜಾಂಗಣದಲ್ಲಿ ಮಧ್ವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಧ್ವಸಿದ್ಧಾಂತದ ಪ್ರಕಾರ ಜ್ಞಾನ ಉಳ್ಳವನು ಮಾತ್ರ ಜೀವವಲ್ಲ. ಭಾವನೆ ಇದ್ದವರು ಜೀವಿಗಳು. ಜ್ಞಾನ ಉಳ್ಳವನು ಜೀವಿಯಾಗಿದ್ದರೆ ಆಧುನಿಕ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕೂಡ ನಮ್ಮ ಸಾಲಿಗೆ ಸೇರಬೇಕಿತ್ತು. ಆದರೆ ಅದನ್ನು ಯಾರೂ ಜೀವಿ ಎನ್ನುವುದಿಲ್ಲ. ಹೀಗಾಗಿ ಆಚಾರ್ಯರ ವಚನಗಳು ಆಧುನಿಕ ವಿಜ್ಞಾನಕ್ಕೆ ನಿಕಟವಾಗಿವೆ ಎಂದರು.
ಭೌತಿಕ ಆಕರ್ಷಣೆ
ಮನುಷ್ಯ ನಿತ್ಯಾನಿತ್ಯ ವಸ್ತುಗಳ ವಿವೇಚನೆ ಇಲ್ಲದೆ ತಪ್ಪಾದ ದಾರಿಯಲ್ಲಿ ಹೋಗುತ್ತಿದ್ದಾನೆ. ಆಧುನಿಕ ಶಿಕ್ಷಣದ ಜೊತೆಗೆ ಸಾಂಪ್ರದಾಯಿಕ ಶಿಕ್ಷಣವೂ ಅಗತ್ಯವಾಗಿದೆ. ಶಾಲಾ ಕಾಲೇಜುಗಳಲ್ಲಿ ಭೌತಿಕ ವಿಚಾರಕ್ಕೆ ಹೆಚ್ಚಿನ ಪ್ರಾಶಸ ನೀಡಲಾಗುತ್ತಿದೆ. ಭೌತಿಕ ಸುಖವೇ ಪರಮಸುಖ ಎಂಬ ಚಿಂತನೆ ಬೆಳೆಯುತ್ತಿದೆ. ಈ ಆಕರ್ಷಣಯೇ ತಂತ್ರಜ್ಞಾನದ ಆವಿಷ್ಕಾರಕ್ಕೆ ಕಾರಣವಾಗಿದೆ. ಹೀಗಾಗಿ ಆಧ್ಯಾತ್ಮಿಕ ಸುಖದಿಂದ ದೂರ ಉಳಿಯುತ್ತಿದ್ದೇವೆ ಎಂದು ಹೇಳಿದರು.
ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು. ವಿದ್ವಾಂಸರಾದ ಕೃಷ್ಣರಾಜ ಕುತ್ಪಾಡಿ, ಡಾ. ಪ್ರತೋಷ್ ಎಪಿ, ಡಾ. ಸುದರ್ಶನ್ ಅವರಿಂದ ಆಧುನಿಕ ವಿಜ್ಞಾನದಲ್ಲಿ ಮಧ್ವಸಿದ್ಧಾಂತದ ಪ್ರಸ್ತುತತೆ ವಿಚಾರಗೋಷ್ಠಿ ನಡೆಯಿತು. ವಿದ್ವಾನ್ ಡಾ. ಷಣ್ಮುಖ ಹೆಬ್ಬಾರ್, ಡಾ. ಸುರೇಶ್ ರಾವ್, ಸಿ.ಆರ್. ಮುರಳೀ ಭಾಗವಹಿಸಿದ್ದರು. ಪಣಿಯಾಡಿ ಮುರಳೀಧರ ತಂತ್ರಿ ಸ್ವಾಗತಿಸಿ, ಗೋಪಾಲಾಚಾರ್ಯ ಕಾರ್ಯಕ್ರಮ ನಿರೂಪಿಸಿದರು.