

ವಿಜಯವಾಣಿ ಸುದ್ದಿಜಾಲ ಉಳ್ಳಾಲ ಮಣ್ಣಿನ ಮಡಕೆ ಬಗ್ಗೆ ಸಮಾಜದಲ್ಲಿ ದೊಡ್ಡ ಮಟ್ಟದ ಜನಜಾಗೃತಿ ಮೂಡುತ್ತಿದೆ. ಈ ಹಿನ್ನೆಲೆಯಲ್ಲಿ ಈ ಕ್ಷೇತ್ರ ವಿಸ್ತರಿಸಬೇಕಾದರೆ ಡಿಜಿಟಲ್ ಮಾರ್ಕೆಟಿಂಗ್ ಅಗತ್ಯ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು. ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಕಾರ್ಯವ್ಯಾಪ್ತಿ ಹೊಂದಿರುವ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ನಿಯಮಿತ ಪುತ್ತೂರು ಇದರ 16ನೇ ಶಾಖೆ ಕೋಟೆಕಾರ್ ಮಾಡೂರು ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಭಾನುವಾರ ಮಾತನಾಡಿದರು. ಗಟ್ಟಿ ಮತ್ತು ಕುಲಾಲ ಸಮಾಜ ಎಲ್ಲವನ್ನೂ ಮಾಡಿದೆ. ಆದರೆ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಹಿಂದೇಟು ಹಾಕುತ್ತಿರುವುದು ಸರಿಯಲ್ಲ. ಕುಂಬಾರಿಕೆ ತರಬೇತಿಗಾಗಿ ಜಮೀನು ಒದಗಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಶೀಘ್ರ ಮುಡಿಪು ಕಾಯರ್ಗೋಳಿಯಲ್ಲಿ ಅಮ್ಮೆಂಬಳ ಬಾಳಪ್ಪರ ವೃತ್ತ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದರು. ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ಭಾಸ್ಕರ ಎಂ.ಪೆರುವಾಯಿ ಅಧ್ಯಕ್ಷತೆ ವಹಿಸಿದ್ದರು. ಮುಡಿಪು ಕುಲಾಲ್ ಸಂಘದ ಅಧ್ಯಕ್ಷ ಪುಂಡರೀಕಾಕ್ಷ ಯು. ಉದ್ಘಾಟಿಸಿದರು. ಶ್ರೀ ವೀರನಾರಾಯಣ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರೇಮಾನಂದ ಕುಲಾಲ್ ದೀಪ ಪ್ರಜ್ವಲನೆಗೈದರು. ಕೋಟೆಕಾರ್ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದಿವ್ಯಾ ಶೆಟ್ಟಿ ಭದ್ರತಾ ಕೊಠಡಿ ಉದ್ಘಾಟಿಸಿದರು. ಹಿರಿಯ ವಕೀಲ ಲಕ್ಷ್ಮಣ ಕುಂದರ್ ಗಣಕ ಯಂತ್ರ ಉದ್ಘಾಟಿಸಿದರು. ರಂಜಿನಿ ಮಾಡೂರು ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ಕೋಟೆಕಾರ್ ಪಟ್ಟಣ ಪಂಚಾಯಿತಿ ಸದಸ್ಯ ಸುಜಿತ್ ಮಾಡೂರು ಮಾರಾಟ ಮಳಿಗೆ ಉದ್ಘಾಟಿಸಿದರು. ಕೊಲ್ಯ ಕುಲಾಲ ಸಂಘದ ಅಧ್ಯಕ್ಷ ಭಾಸ್ಕರ್ ಕುತ್ತಾರ್, ಹಿರಿಯರಾದ ಸೀತಾರಾಮ ಕುಲಾಲ್, ಐತಪ್ಪ ಮೂಲ್ಯ, ಅಶೋಕ್ ಅಮೀನ್ ಮೊದಲಾದವರು ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಜನಾರ್ದನ ಮೂಲ್ಯ ಸ್ವಾಗತಿಸಿದರು. ಶಾಖಾ ವ್ಯವಸ್ಥಾಪಕಿ ಸುಕನ್ಯ ವಂದಿಸಿದರು. ಪ್ರವೀಣ್ ಬಸ್ತಿ ಕಾರ್ಯಕ್ರಮ ನಿರೂಪಿಸಿದರು.
ಮಣ್ಣು ಮತ್ತು ಪರಿಸರದಿಂದ ಜನರು ದೂರವಾದಾಗ ಕಾಯಿಲೆ ಸಾಮಾನ್ಯ. ಮಕ್ಕಳನ್ನು ಆರೋಗ್ಯವಾಗಿಡಲು ಮಣ್ಣಿನಿಂದ ತಯಾರಿಸಿದ ವಸ್ತುಗಳ ಬಳಕೆ ಅಗತ್ಯ. ಪ್ರಸ್ತುತ ದಿನಗಳಲ್ಲಿ ಕುಂಬಾರಿಕೆ ಮೂಲಕ ಪ್ಲಾಸ್ಟಿಕ್, ಇತರ ಮಡಕೆಗಳಿಗೆ ಕಡಿವಾಣ ಹಾಕುವಲ್ಲಿ ಸಂಘ ಯಶಸ್ವಿಯಾಗಿದೆ. ಮುಂದಿನ ಜನಾಂಗಕ್ಕೆ ಗುಡಿ ಕೈಗಾರಿಕೆ ಪರಿಚಯಿಸುವ ಕೆಲಸ ನಡೆಯಬೇಕು. ಯು.ಟಿ.ಖಾದರ್, ವಿಧಾನಸಭಾಧ್ಯಕ್ಷ ಸಹಕಾರಿ ಕ್ಷೇತ್ರದಲ್ಲಿ ನಮಗೆ ಯಾರೊಂದಿಗೂ ಪೈಪೋಟಿ ಇಲ್ಲ. ಉತ್ತಮ ಸೇವೆ, ಕುಂಬಾರಿಕೆ ಕಸುಬು ಉಳಿಸಿ ಜೀವನಮಟ್ಟ ಸುಧಾರಣೆಯ ಧ್ಯೇಯದೊಂದಿಗೆ ನೂತನ ಶಾಖೆ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಮಂಗಳೂರು, ಕೊಡಗು ಮತ್ತು ಉಡುಪಿಯಲ್ಲೂ ಶಾಖೆ ಆರಂಭಿಸಲಿದ್ದೇವೆ. ಕುಂಬಾರಿಕೆ ತರಬೇತಿ ಪಡೆಯುವ ಆಸಕ್ತರಿಗೆ ಹತ್ತು ಸಾವಿರ ರೂ. ಕೊಡುತ್ತೇವೆ. ಭಾಸ್ಕರ ಎಂ.ಪೆರುವಾಯಿ, ಅಧ್ಯಕ್ಷರು, ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ https://www.vijayavani.net/panchalingeshwar-high-school-sports https://www.vijayavani.net/sulya-taluk-literature-conference