Film Reviews : ಸಿನಿಮಾ ಬಿಡುಗಡೆಯಾದ ಮೂರು ದಿನಗಳವರೆಗೆ ಫೇಸ್‌ಬುಕ್, ಯೂಟ್ಯೂಬ್ ಹಾಗೂ ಎಕ್ಸ್ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ವಿಮರ್ಶೆಯನ್ನು ಬ್ಯಾನ್ ಮಾಡಬೇಕೆಂದು ಕೋರಿ ತಮಿಳು ಚಲನಚಿತ್ರ ಸಕ್ರಿಯ ನಿರ್ಮಾಪಕರ ಸಂಘ ( TFAPA ) ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು, ದುರುದ್ದೇಶಪೂರಿತ ಅಭಿಪ್ರಾಯಗಳು ಅಥವಾ ವಿಮರ್ಶೆಗಳ ಮೂಲಕ ದ್ವೇಷವನ್ನು ಹರಡುವ ಜನರ ವಿರುದ್ಧ ಪೊಲೀಸ್ ದೂರು ದಾಖಲಿಸಬಹುದು. ಆದರೆ, ಒಬ್ಬರ ಅಭಿಪ್ರಾಯಕ್ಕೆ ಕಡಿವಾಣ ಹಾಕುವುದು ವಾಕ್ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ ಎಂದರು. ಅಲ್ಲದೆ, ಸಿನಿಮಾ ವಿಮರ್ಶೆಗಳನ್ನು ನಿಯಂತ್ರಿಸುವ ಕ್ರಮಗಳ ಬಗ್ಗೆ ತಿಳಿಸುವಂತೆ ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ಯೂಟ್ಯೂಬ್‌ಗೆ ಕೋರ್ಟ್ ನಿರ್ದೇಶನ ನೀಡಿದೆ.
ಯೂಟ್ಯೂಬ್ ಚಾನೆಲ್‌ಗಳು, ಎಕ್ಸ್, ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಸಿನಿಮಾ ವಿಮರ್ಶೆ ಮಾಡುವಾಗ ಆನ್‌ಲೈನ್ ಸಿನಿಮಾ ವಿಮರ್ಶಕರು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ತರಲು ತಮಿಳುನಾಡು ಚಲನಚಿತ್ರ ಸಂಸ್ಥೆಯು ತಮ್ಮ ಅರ್ಜಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ವಿನಂತಿಸಿದೆ.
ನವೆಂಬರ್ 20 ರಂದು ತಮಿಳುನಾಡು ನಿರ್ಮಾಪಕರ ಮಂಡಳಿ (TNPC), ಚಿತ್ರ ಪ್ರದರ್ಶನದ ನಂತರ ಥಿಯೇಟರ್ ಆವರಣದಲ್ಲಿ ವಿಡಿಯೋ ವಿಮರ್ಶೆಗಳು ಮತ್ತು ಅಭಿಪ್ರಾಯಗಳನ್ನು ರೆಕಾರ್ಡ್ ಮಾಡುವ ಯೂಟ್ಯೂಬ್ ಚಾನೆಲ್‌ಗಳನ್ನು ನಿಷೇಧಿಸುವಂತೆ ಥಿಯೇಟರ್ ಮಾಲೀಕರನ್ನು ಕೇಳಿಕೊಂಡಿತು. ಇದರ ಬೆನ್ನಲ್ಲೇ ಕೆಲವು ಚಿತ್ರಮಂದಿರಗಳು ಯೂಟ್ಯೂಬ್ ಚಾನೆಲ್‌ಗಳಿಗೆ ಥಿಯೇಟರ್ ಆವರಣಕ್ಕೆ ಪ್ರವೇಶಿಸಲು ಅವಕಾಶ ನೀಡುವುದನ್ನು ನಿಲ್ಲಿಸಿದವು.
ಸಿನಿಮಾ ವಿಮರ್ಶಕರು ವೈಯಕ್ತಿಕ ದಾಳಿ ಮಾಡುತ್ತಿದ್ದಾರೆ. ಅಲ್ಲದೆ, ಸಿನಿಮಾ ವಿಮರ್ಶೆಗಳ ನೆಪದಲ್ಲಿ ಹರಡುತ್ತಿರುವ ದ್ವೇಷದ ಪ್ರಚೋದನೆಗಳನ್ನು ನಿಲ್ಲಿಸಬೇಕು ಎಂದು ಟಿಎನ್ಪಿಸಿ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಕೆಲ ಸಿನಿಮಾ ವಿಮರ್ಶೆಗಳು ಇಂಡಿಯನ್ 2, ವೆಟ್ಟೈಯಾನ್ ಮತ್ತು ಕಂಗುವ ಮೇಲೆ ಪರಿಣಾಮ ಬೀರಿರುವುದನ್ನು ಅವರು ಉಲ್ಲೇಖಿಸಿದ್ದಾರೆ.
ತಮಿಳಿನಲ್ಲಿ ಇತ್ತೀಚೆಗಷ್ಟೇ ತೆರೆಕಂಡ ದೊಡ್ಡ ಸಿನಿಮಾ ‘ಕಂಗುವ’. ಸೂರ್ಯ ನಾಯಕನಾಗಿ ನಟಿಸಿರುವ ಈ ಚಿತ್ರಕ್ಕೆ ಮೊದಲ ದಿನದಿಂದಳೇ ನೆಗೆಟಿವ್ ಟಾಕ್ ಹಬ್ಬಿತು. ಇದಕ್ಕೆ ವಿಮರ್ಶೆಗಳೇ ಕಾರಣ ಎಂದು ಭಾವಿಸಿದ ನಿರ್ಮಾಪಕರು, ಮೊದಲ ದಿನವೇ ಥಿಯೇಟರ್ ಬಳಿ ರಿವ್ಯೂ ನೀಡದಂತೆ ಯೂಟ್ಯೂಬರ್ಗಳನ್ನು ಬ್ಯಾನ್ ಮಾಡಲು ನಿರ್ಧರಿಸಿದರು. ಇದರ ಭಾಗವಾಗಿ ಥಿಯೇಟರ್ ಮಾಲೀಕರಿಗೆ ಈ ವಿಚಾರದಲ್ಲಿ ಸಹಕರಿಸುವಂತೆ ಕೋರಲಾಯಿತು. ಇದಕ್ಕೆ ಥಿಯೇಟರ್ ಮಾಲೀಕರು ಕೂಡ ಒಪ್ಪಿಗೆ ಸೂಚಿಸಿದ್ದಾರೆ. (ಏಜೆನ್ಸೀಸ್)
ನೋಡೋಕೆ ಚೆನ್ನಾಗಿದೆ ಅಂತ ಮೋಸ ಹೋಗ್ಬೇಡಿ…ತಾಜಾ, ರುಚಿಯಾದ ಕಿತ್ತಳೆ ಹಣ್ಣು ಖರೀದಿಸಲು ಇಲ್ಲಿದೆ ಟಿಪ್ಸ್! Orange