ಮೂರು ಜಿಲ್ಲೆಗಳಲ್ಲಿ RSS ರ‍್ಯಾಲಿಗೆ ಅನುಮತಿ ನಿರಾಕರಿಸಿದ ಹೈಕೋರ್ಟ್

rss
Published on

ಚೆನ್ನೈ: ರಾಜ್ಯಾದ್ಯಂತ 35 ಸ್ಥಳಗಳಲ್ಲಿ ಅಕ್ಟೋಬರ್ 22 ರಿಂದ 29 ರವರೆಗೆ ರ‍್ಯಾಲಿ ನಡೆಸಲು ಅನುಮತಿ ನೀಡುವಂತೆ ಆರ್‌ಎಸ್‌ಎಸ್ ಹೈಕೋರ್ಟ್‌ನ ಮಧುರೈ ಶಾಖೆಯಲ್ಲಿ ಅರ್ಜಿ ಸಲ್ಲಿಸಿತ್ತು. ಈ ಕುರಿತಾಗಿ ಕೋರ್ಟ್​​ ಮಹತ್ತರವಾದ ತೀರ್ಪು ನೀಡಿದೆ.

ಮಧುರೈ ಸೇರಿದಂತೆ ದಕ್ಷಿಣದ 14 ಜಿಲ್ಲೆಗಳ 20 ಸ್ಥಳಗಳಲ್ಲಿ 22 ರಿಂದ 29ರವರೆಗೂ ಆರ್‌ಎಸ್‌ಎಸ್ ರ‍್ಯಾಲಿ ನಡೆಸಲು ಅನುಮತಿ ನೀಡುವಂತೆ ಕೋರಿ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

ಮಧುರೈ, ತಂಜಾವೂರು, ತಿರುಚ್ಚಿ, ದಿಂಡಿಗಲ್, ತೇಣಿ, ಪುದುಕೊಟ್ಟೈ, ಕರೂರ್, ತಿರುನಲ್ವೇಲಿ, ತೂತುಕುಡಿ, ತೆಂಕಶಿ, ವಿರುಧುನಗರ, ಶಿವಗಂಗೈ, ರಾಮನಾಥಪುರಂ, ಕನ್ಯಾಕುಮಾರಿ ಸೇರಿದಂತೆ 14 ಜಿಲ್ಲೆಗಳಲ್ಲಿ ರ‍್ಯಾಲಿ ನಡೆಸಲು ಅನುಮತಿ ನೀಡುವಂತೆ ಮನವಿಯಲ್ಲಿ ಕೋರಲಾಗಿತ್ತು. ಆದಾಗ್ಯೂ, 11 ಜಿಲ್ಲೆಗಳಲ್ಲಿ ಮೆರವಣಿಗೆ ನಡೆಸಲು ಅನುಮತಿ ನೀಡಲಾಗಿದ್ದು, ಮೂರು ಜಿಲ್ಲೆಗಳಲ್ಲಿ ಅನುಮತಿ ನಿರಾಕರಿಸಲಾಗಿದೆ. ತಮಿಳುನಾಡಿನ ಮಧುರೈ, ರಾಮನಾಥಪುರಂ ಮತ್ತು ಶಿವಗಂಗೈ ಜಿಲ್ಲೆಗಳಲ್ಲಿ ಇದೇ 22 ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ರ‍್ಯಾಲಿ ನಡೆಸಲು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಅನುಮತಿ ನಿರಾಕರಿಸಿದೆ.

ಕಾನೂನು ಸುವ್ಯವಸ್ಥೆ ಕಾಪಾಡಲು ಸುಮಾರು 20,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು ಮತ್ತು ರಾಮನಾಥಪುರಂನಲ್ಲಿಯೇ ಸುಮಾರು 7,000 ಪೊಲೀಸ್ ಸಿಬ್ಬಂದಿ ಅಗತ್ಯವಿದೆ ಎಂದು ನ್ಯಾಯಮೂರ್ತಿ ಇಳಂಗೋವನ್ ಗಮನಿಸಿದರು. ಹೀಗಾಗಿ ಮಧುರೈ, ಶಿವಗಂಗಾ ಮತ್ತು ರಾಮನಾಥಪುರ ಜಿಲ್ಲೆಗಳಲ್ಲಿ ರಕ್ಷಣೆ ನೀಡಲು ಪೊಲೀಸರಿಗೆ ಸಾಧ್ಯವಾಗದೇ ಇರಬಹುದು. ಅಕ್ಟೋಬರ್ 22 ರಂದು ಮಾತ್ರ ಕಾರ್ಯಕ್ರಮವನ್ನು ನಡೆಸಬೇಕು ಮತ್ತು ಕೆಲವು ಜಿಲ್ಲೆಗಳಿಗೆ ಪೊಲೀಸರು ಸೂಚಿಸಿದ ಪರ್ಯಾಯ ಮಾರ್ಗಗಳನ್ನು ಸ್ವೀಕರಿಸಬೇಕು ಎಂಬ ಷರತ್ತಿನ ಮೇಲೆ ನ್ಯಾಯಾಧೀಶರು ಅನುಮತಿ ನೀಡಿದರು.

ಅಕ್ಟೋಬರ್ 22 ರಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೆರವಣಿಗೆ ಮತ್ತು ಸಾರ್ವಜನಿಕ ಸಭೆಗಳನ್ನು ನಡೆಸುವ ಮೂಲಕ ಸಂಘಟನೆಯ ಸಂಸ್ಥಾಪಕರ ದಿನಾಚರಣೆಯನ್ನು ಆಚರಿಸಲು ಅನುಮತಿ ಕೋರಿ ಆಯಾ ಜಿಲ್ಲೆಗಳ ಆರ್‌ಎಸ್‌ಎಸ್ ಪದಾಧಿಕಾರಿಗಳು ಸಲ್ಲಿಸಿದ 20 ಅರ್ಜಿಗಳ ಬ್ಯಾಚ್‌ನಲ್ಲಿ ನ್ಯಾಯಮೂರ್ತಿ ಜಿ ಇಳಂಗೋವನ್ ಅವರು ಈ ಆದೇಶ ನೀಡಿದ್ದಾರೆ.  ತಮಿಳುನಾಡಿನ ಹಲವಾರು ಜಿಲ್ಲೆಗಳಲ್ಲಿ ರ್ಯಾಲಿಗಳು ಮತ್ತು ಸಾರ್ವಜನಿಕ ಸಭೆಗಳನ್ನು ನಡೆಸಲು ಸಂಘಟನೆಯು ನಿರ್ಧರಿಸಿದೆ.

ಕಳೆದ ವರ್ಷವೂ, ಏಪ್ರಿಲ್‌ನಲ್ಲಿ ರಾಜ್ಯದ 45 ಸ್ಥಳಗಳಲ್ಲಿ ರೂಟ್ ಮಾರ್ಚ್ ನಡೆಸಲು ಆರ್‌ಎಸ್‌ಎಸ್‌ಗೆ ಪೊಲೀಸರು ಅನುಮತಿ ನಿರಾಕರಿಸಿದ್ದರು. ಆರ್‌ಎಸ್‌ಎಸ್ ಮದ್ರಾಸ್ ಹೈಕೋರ್ಟ್‌ಗೆ ಮೊರೆ ಹೋಗಿತ್ತು ಮತ್ತು ರ್ಯಾಲಿಗಳನ್ನು ನಡೆಸಲು ಅನುಮತಿ ನೀಡಲಾಯಿತು. ಆದಾಗ್ಯೂ, ತಮಿಳುನಾಡಿನ ಡಿಎಂಕೆ ಸರ್ಕಾರವು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳನ್ನು ಉಲ್ಲೇಖಿಸಿ ಹೈಕೋರ್ಟ್‌ನ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಅದನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಸುಪ್ರೀಂ ಕೋರ್ಟ್‌ನ ಆದೇಶದ ನಂತರ, ಸಂಘಟನೆಯು ಏಪ್ರಿಲ್ 12 ರಂದು ರಾಜ್ಯದ ಪೊಲೀಸ್ ಮಹಾನಿರ್ದೇಶಕರನ್ನು ಸಂಪರ್ಕಿಸಿತು ಮತ್ತು ಏಪ್ರಿಲ್ 14, ಏಪ್ರಿಲ್ 15 ಮತ್ತು ಏಪ್ರಿಲ್ 16 ರ ಮೂರರಲ್ಲಿ ಯಾವುದಾದರೂ ಒಂದು ದಿನಾಂಕದಂದು ರ್ಯಾಲಿಗಳನ್ನು ನಡೆಸಲು ಅನುಮತಿ ಕೋರಿತು. ಪೊಲೀಸ್ ಇಲಾಖೆಯು ಏಪ್ರಿಲ್ 16 ಕ್ಕೆ ಅನುಮತಿ ನೀಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net