ಮತಾಂತರವಾಗಿ ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದಕ್ಕೆ ಮಹಿಳೆಯ ಗಂಟಲು ಸೀಳಿ ಹತ್ಯೆಗೈದ ಅನ್ಯಧರ್ಮೀಯ! Conversion

Conversion
Published on

Conversion : ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ, ಮದುವೆಯಾಗಲು ನಿರಾಕರಿಸಿದ್ದಕ್ಕೆ 35 ವರ್ಷದ ಮಹಿಳೆಯ ಕುತ್ತಿಗೆಯನ್ನು ಸೀಳಿ, ಬರ್ಬರವಾಗಿ ಕೊಲೆ ಮಾಡಿರುವ ಆರೋಪ ಅನ್ಯಧರ್ಮದ ವ್ಯಕ್ತಿಯೊಬ್ಬನ ವಿರುದ್ಧ ಕೇಳಿಬಂದಿದೆ. ಈ ಆಘಾತಕಾರಿ ಘಟನೆ ಮಧ್ಯಪ್ರದೇಶದ ನೇಪಾನಗರ ಪೊಲೀಸ್​ ಠಾಣಾ ವ್ಯಾಪ್ತಿಯ ನವರಾದಲ್ಲಿ ನಡೆದಿದೆ.

ಸಂತ್ರಸ್ತೆಯನ್ನು ಭಾಗ್ಯಶ್ರೀ ನಾಮದೇವ್ ಧನುಕ್​ ಎಂದು ಗುರುತಿಸಲಾಗಿದೆ. ಆಕೆಯ ಮನೆಯಲ್ಲೇ ಆರೋಪಿ ಶೇಖ್ ರಯೀಸ್ (42) ಹಲ್ಲೆ ನಡೆಸಿ, ಗಂಟಲು ಸೀಳಿದ್ದಾನೆ. ಅನೇಕ ಬಾರಿ ಚಾಕುವಿನಿಂದ ಇರಿದ ಪರಿಣಾಮ ತೀವ್ರ ರಕ್ತಸ್ರಾವಾಗಿ ಭಾಗ್ಯಶ್ರೀ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಈ ಘಟನೆಯ ಬಗ್ಗೆ ಮಾತನಾಡಿರುವ ಸಂತ್ರಸ್ತೆಯ ಸಹೋದರಿ ಸುಭದ್ರಾ ಬಾಯಿ, ಭಯಾನಕ ಆರೋಪ ಮಾಡಿದ್ದಾರೆ. ಅದೇನೆಂದರೆ, ಆರೋಪಿ ರಯೀಸ್, ಭಾಗ್ಯಶ್ರೀಯ ಕೂದಲು ಹಿಡಿದು ಹೊಡೆಯುತ್ತಿದ್ದ ಮತ್ತು ನಿತ್ಯವು ಕಿರುಕುಳ ನೀಡುತ್ತಿದ್ದ. ಆತನ ಧರ್ಮಕ್ಕೆ ಮತಾಂತರವಾಗಿ, ಮದುವೆ ಮಾಡಿಕೊಳ್ಳುವಂತೆ ತುಂಬಾ ದಿನಗಳಿಂದ ಆಕೆಯ ಮೇಲೆ ಒತ್ತಡ ಹೇರುತ್ತಿದ್ದ. ಆದರೆ, ನನ್ನ ಸಹೋದರಿ ನಿರಾಕರಿಸುತ್ತಿದ್ದಳು. ಹೀಗಾಗಿ, ರಯೀಸ್​, ರಾತ್ರಿ ವೇಳೆ ಮನೆಗೆ ನುಗ್ಗಿ ಆಕೆಯ ಕತ್ತು ಸೀಳಿದ್ದಾನೆ ಎಂದು ಹೇಳಿದ್ದಾರೆ.

ಆರೋಪಿ ರಯೀಸ್​ ವಿರುದ್ಧ ಕೊಲೆ ಮತ್ತು ದೌರ್ಜನ್ಯ ಸೆಕ್ಷನ್​ಗಲ ಅಡಿಯಲ್ಲಿ ಆರೋಪ ಹೊರಿಸಲಾಗಿದ್ದು, ಆತನನ್ನು ಪೊಲೀಸ್​ ಕಸ್ಟಡಿಯಲ್ಲಿ ಇರಿಸಲಾಗಿದೆ ಎಂದು ಬುರ್ಹಾನ್‌ಪುರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್‌ಪಿ ಅಂತರಸಿಂಗ್ ಕನೇಶ್ ದೃಢಪಡಿಸಿದ್ದಾರೆ.

ಇನ್ನು ಈ ಘಟನೆ ಹಿಂದೂ ಸಮುದಾಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿಭಟನೆಯ ಮುಂದಾಳತ್ವ ವಹಿಸಿರುವ ಅಮಿತ್ ವರುಡೆ, ಇದನ್ನು "ಲವ್ ಜಿಹಾದ್" ಎಂದು ಕರೆದಿದ್ದಾರೆ. ಅಲ್ಲದೆ, ಈ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯವಿದೆ ಎಂದು ಆರೋಪ ಮಾಡಿದ್ದಾರೆ. ಕೊಲೆಯಾದ ಭಾಗ್ಯಶ್ರೀ ಕೇವಲ ಮೂರ್ನಾಲ್ಕು ದಿನಗಳ ಹಿಂದೆ ದೂರು ದಾಖಲಿಸಿದ್ದರು. ಆದರೆ, ಆರೋಪಿಯನ್ನು ಬಿಡುಗಡೆ ಮಾಡಲಾಯಿತು ಎಂದು ಆರೋಪ ಮಾಡಿರುವ ಅಮಿತ್​ ವರುಡೆ, ರಯೀಸ್​ನನ್ನು ಗಲ್ಲಿಗೇರಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.

ಪೊಲೀಸ್​ ಅಧಿಕಾರಿಗಳು ಈ ಪ್ರಕರಣದಲ್ಲಿ ತ್ವರಿತ ತನಿಖೆ ನಡೆಸಿದ್ದು, ಆರೋಪಿಯ ಅಕ್ರಮ ಆಸ್ತಿಗಳನ್ನು ಗುರುತು ಮಾಡಿದ್ದಾರೆ. ಸದ್ಯ ತನಿಖೆ ಮುಂದುವರಿದಿದೆ. ಇತ್ತ ಅನೇಕ ಹಿಂದುಗಳು ಪ್ರತಿಭಟನೆ ನಡೆಸುತ್ತಿದ್ದು, ಆರೋಪಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net