

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ದೇಶದ ಆಧ್ಯಾತ್ಮಿಕತೆಯ ಬಗ್ಗೆ ಅರಿತುಕೊಳ್ಳಲು ವಿಶ್ವ ಇಂದು ಭಾರತದ ಕಡೆ ಕಾತರದಿಂದ ನೋಡುವ ಸನ್ನಿವೇಶ ಸೃಷ್ಟಿಯಾಗಿದೆ ಎಂದು ವಿಶ್ವ ಹಿಂದು ಪರಿಷತ್ ಕೇರಳ ಪ್ರಾಂತ್ಯ ಕಾರ್ಯಾಧ್ಯಕ್ಷ ವತ್ಸನ್ ತಿಲ್ಲಂಗೇರಿ ತಿಳಿಸಿದರು.
ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವಾ ಕಾರ್ಯಕ್ರಮದ ಅಂಗವಾಗಿ ಸೋಮವಾರ ಧಾರ್ಮಿಕ ಸಭೆಯಲ್ಲಿ ಮುಖ್ಯ ಭಾಷಣ ಮಾಡಿದರು.
ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಸದಾಶಿವ ಶೆಟ್ಟಿ ಕನ್ಯಾನ, ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ವಿಷ್ಣು ಹೆಬ್ಬಾರ್, ಮಂಗಳೂರು ಶ್ರೀ ಸೋಮನಾಥ ದೇವಸ್ಥಾನದ ಮೊಕ್ತೇಸರ ರವೀಂದ್ರನಾಥ ಆಳ್ವ ಗೌರವ ಉಪಸ್ಥಿತರಿದ್ದರು.
ಉಡುಪಿಯ ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್ ಪ್ರಮೋದ್ ಕುಮಾರ್, ಮಂಗಳೂರು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ ಸಮಿತಿ ಕೋಶಾಧಿಕಾರಿ ಪದ್ಮರಾಜ ರಾಮಯ್ಯ, ಕರ್ನಾಟಕ ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಯೋಗೀಶ ರಾವ್ ಚಿಗುರುಪಾದೆ, ಕಾಸರಗೋಡು ಶ್ರೀ ವರದರಾಜ ವೆಂಕಟ್ರಮಣ ದೇವಸ್ಥಾನ ಆಡಳಿತ ಮೊಕ್ತೇಸರ ಜಗದೀಶ ಕಾಮತ್ ಕೆ. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಜತೆ ಕಾರ್ಯದರ್ಶಿ ಬಿ.ಸುರೇಶ್ ನಾಯ್ಕ ಸ್ವಾಗತಿಸಿದರು. ಕೃಷ್ಣ ಮೂರ್ತಿ ಎಡಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಪಾರೆಕಟ್ಟ ವಂದಿಸಿದರು.
ಕುಂಭ ಮೇಳ ಸಮಾನ ಕಾರ್ಯಕ್ರಮ
ವಿಶ್ವಾವಸು ಸಂವತ್ಸರ ಆರಂಭವಾಗಿದ್ದು, ಸಕಲ ಸಂಪತ್ತು ಕೈಗೂಡುವ ಕಾಲ ಇದಾಗಿದೆ. ಯಾವ ದುರಿತಗಳಿದ್ದರೂ ಪರಿಹಾರಗೊಂಡು ಸಮೃದ್ಧಿ ಬಲಗೊಳ್ಳುವ ಸದಾಶಯ ನಮ್ಮ ಅಂತರಂಗದಲ್ಲಿರಲಿ. ಮಧೂರಲ್ಲಿ ನಡೆಯುತ್ತಿರುವುದು ಕುಂಭಮೇಳ ಸಮಾನ ಭಕ್ತಿಯ ಔನ್ನತ್ಯವಾಗಿದೆ ಎಂದು ಶ್ರೀಸಂಸ್ಥಾನ ಗೋಕರ್ಣ, ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು. ಬ್ರಹ್ಮಕಲಶ-ಮೂಡಪ್ಪ ಸೇವೆ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಬುಟ್ಟಿ ತಯಾರಿಸಿ ನೀಡುವಲ್ಲಿ ನೇತೃತ್ವ ವಹಿಸಿದ್ದ ಕೊರಗ ಸಮುದಾಯದ ಹಿರಿಯರಾದ ಚೋಮು, ಅಂಗಾರೆ ಮೊದಲಾದವರನ್ನು ರಾಘವೇಶ್ವರ ಶ್ರೀಗಳು ಅನುಗ್ರಹ ಮಂತ್ರಾಕ್ಷತೆ, ಸ್ಮರಣಿಕೆ ನೀಡಿ ಹರಸಿದರು. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಬ್ರಹ್ಮಕಲಶೋತ್ಸವ ನಡೆದುಬಂದ ಹಾದಿಯ ಬಗ್ಗೆ ಮಾಹಿತಿ ನೀಡಿದರು.