ಮಧುಬಂಗಾರಪ್ಪ, ಜಿಟಿಡಿ, ಶಶಿಭೂಷಣ್​, ಅಸ್ನೋಟಿಕರ್​ ಜೆಡಿಎಸ್​ ಬಿಡ್ತಾರಾ? ಎಚ್​ಡಿಡಿ ಸ್ಫೋಟಕ ಹೇಳಿಕೆ

H D Devegowda
Published on

ಹಾಸನ: ಲೋಕಸಭಾ ಚುನಾವಣಾ ಸೋಲಿನ ಬಳಿಕ ಜೆಡಿಎಸ್​ ಚಟುವಟಿಕೆಯಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳದ ಜೆಡಿಎಸ್‌ ಮುಖಂಡ ಮಧುಬಂಗಾರಪ್ಪ, ಜೆಡಿಎಸ್​ ತೊರೆದು ಕಾಂಗ್ರೆಸ್​ ಮನೆಗೆ ಕಾಲಿಡುವ ಸನಿಹದಲ್ಲಿದ್ದಾರೆ ಎಂಬ ಗುಮಾನಿ ಗುಟ್ಟಾಗಿಯೇನೂ ಉಳಿದಿಲ್ಲ. ಶಾಸಕ ಜಿ.ಟಿ.ದೇವೇಗೌಡ ಸೇರಿದಂತೆ ಶಶಿಭೂಷಣ್​ ಹೆಗಡೆ, ಆನಂದ್​ ಅಸ್ನೋಟಿಕರ್ ಕೂಡ ಜೆಡಿಎಸ್​ ತೊರೆಯಲಿದ್ದಾರೆ ಎಂಬ ಸುದ್ದಿ ಚಾಲ್ತಿಯಲ್ಲಿದೆ. ಘಟಾನುಘಟಿ ನಾಯಕರೇ ಪಕ್ಷ ತೊರೆಯುವ ಮೂಲಕ ಜೆಡಿಎಸ್​ಗೆ ಪೆಟ್ಟು ಮೇಲೊಂದು ಪೆಟ್ಟು ಎಂಬಂತೆ ಆಘಾತ ಕೊಡುತ್ತಾರೆ ಎಂಬ ವಿಚಾರ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವುದು ಸುಳ್ಳಲ್ಲ.

ಆದರೆ, ಈ ಪಕ್ಷಾಂತರ ಕುರಿತು ಗುರುವಾರ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಜೆಡಿಎಸ್​ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಲಕ್ಷಾಂತರ ಕಾರ್ಯಕರ್ತರು ನಮ್ಮೊಟ್ಟಿಗಿದ್ದಾರೆ ಎಂದ ದೇವೇಗೌಡ, ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಸೇರಿದಂತೆ ಯಾವ ಮುಖಂಡರೂ ಜೆಡಿಎಸ್​ ತೊರೆಯಲ್ಲ. 2023ರವರೆಗೆ ಜತೆಗಿರುವುದಾಗಿ ಜಿಟಿಡಿ ಖುದ್ದಾಗಿ ನನ್ನೊಂದಿಗೆ ಮಾತಾಡಿದ್ದಾರೆ. ಆ ಬಳಿಕವೂ ಜೆಡಿಎಸ್​ನಲ್ಲೇ ಇರುತ್ತಾರೆ ಎಂದರು. ಇದನ್ನೂ ಓದಿರಿ ಹತ್ತು ಆನೆ ಬೇಕಾದ್ರು ಸಾಕ್ತೀನಿ.. ನಮ್ಮಪ್ಪ ಮದ್ವೆ ಆಗು ಅಂತಿದ್ದಾರೆ.. ಏನು ಮಾಡಲಿ?: ಪ್ರಜ್ವಲ್​ ರೇವಣ್ಣ

ಜೆಡಿಎಸ್​ ಮುಖಂಡರಾದ ಶಶಿಭೂಷಣ್​ ಹೆಗಡೆ, ಆನಂದ್​ ಅಸ್ನೋಟಿಕರ್​, ಮಧು ಬಂಗಾರಪ್ಪ ಪಕ್ಷ ಬಿಡುತ್ತಾರೆಂಬುದೆಲ್ಲ ಸತ್ಯಕ್ಕೆ ದೂರವಾದ ಸಂಗತಿ. ಮಧು ಬಂಗಾರಪ್ಪ ಸೋತ ಬಳಿಕ ಪಕ್ಷದ ಕಚೇರಿಗೆ ಬರುವುದಾಗಿ ಪದೇಪದೆ ಹೇಳುತ್ತಿದ್ದರು. ಆದರೆ, ಒಂದು ಬಾರಿಯೂ ಬರಲಿಲ್ಲ. ಅವರನ್ನು ಗೆಲ್ಲಿಸಲು ಕುಮಾರಸ್ವಾಮಿ ಎಷ್ಟು ಕಷ್ಟಪಟ್ಟಿದ್ದಾರೆಂಬುದು ನನಗೆ ಗೊತ್ತು ಎಂದು ದೇವೇಗೌಡ ಹೇಳಿದರು.

ರಾಜ್ಯಸಭೆ ಸದಸ್ಯನಾಗಿ ಮುಂದಿನ ಮೂರು ತಿಂಗಳಲ್ಲಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಹೋಗಿ ರಾಜಕೀಯ ಜನ್ಮ ನೀಡಿದ ಜನರನ್ನು ಭೇಟಿಯಾಗುತ್ತೇನೆ. ತಾಪಂ ಹಾಗೂ ಜಿಪಂ ಚುನಾವಣೆ ಸಮೀಪಿಸುತ್ತಿರುವುದರಿಂದ ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸವೂ ಆಗಬೇಕಿದೆ ಎಂದರು. ಮಾರ್ಚ್​ ನಾಲ್ಕನೇ ವಾರದಲ್ಲಿ ಮಹಿಳಾ ಸಮಾವೇಶ, ವಿಜಯಪುರ ಹಾಗೂ ಯಾದಗಿರಿಯಲ್ಲಿ ಕಾರ್ಯಕರ್ತರ ಸಭೆ ನಡೆಸಲಾಗುವುದು ಎಂದರು.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net