

ಲಖನೌ: ಐಪಿಎಲ್‌ಗೆ ಹೊಸದಾಗಿ ಸೇರ್ಪಡೆಗೊಂಡಿರುವ ಲಖನೌ ್ರಾಂಚೈಸಿಗೆ ‘ಲಖನೌ ಸೂಪರ್‌ಜೈಂಟ್ಸ್’ ಎಂದು ಹೆಸರಿಡಲಾಗಿದೆ. ಕನ್ನಡಿಗ ಕೆಎಲ್ ರಾಹುಲ್ ಈಗಾಗಲೆ ಈ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ. ಆಸ್ಟ್ರೇಲಿಯಾದ ಮಾರ್ಕಸ್ ಸ್ಟೋಯಿನಿಸ್ ಮತ್ತು ಭಾರತದ ಯುವ ಸ್ಪಿನ್ನರ್ ರವಿ ಬಿಷ್ಣೋಯಿ ಡ್ರಾಫ್ಟ್ ಮೂಲಕ ತಂಡಕ್ಕೆ ಈಗಾಗಲೆ ಸೇರ್ಪಡೆಯಾಗಿರುವ ಮತ್ತಿಬ್ಬರು ಆಟಗಾರರು.
ಸಂಜೀವ್ ಗೋಯೆಂಕಾ ಮಾಲೀಕತ್ವದ ಆರ್‌ಪಿಎಸ್‌ಜಿ ಗ್ರೂಪ್ ಕಳೆದ ವರ್ಷ ಬಿಸಿಸಿಐಗೆ ದಾಖಲೆಯ 7,090 ಕೋಟಿ ರೂ. ಬಿಡ್ ಸಲ್ಲಿಸಿ ತಂಡವನ್ನು ಖರೀದಿಸಿತ್ತು. ಹೊಸ ತಂಡಕ್ಕೆ ಹೆಸರು ಸೂಚಿಸಲು ಅಭಿಮಾನಿಗಳಿಗೆ ಕೇಳಿಕೊಂಡಿದ್ದ ಆರ್‌ಪಿಎಸ್‌ಜಿ ಗ್ರೂಪ್, ಅತ್ಯಧಿಕವಾಗಿ ಶಿಫಾರಸುಗೊಂಡ ಹೆಸರನ್ನು ಆಯ್ದುಕೊಂಡಿದೆ.
ಆರ್‌ಪಿಎಸ್‌ಜಿ ಗ್ರೂಪ್ ಈ ಮುನ್ನ ಐಪಿಎಲ್‌ನಲ್ಲಿ ಪುಣೆ ಸೂಪರ್‌ಜೈಂಟ್ಸ್ ತಂಡದ ಒಡೆತನ ಹೊಂದಿತ್ತು. ಇದೀಗ ಲಖನೌ ತಂಡಕ್ಕೂ ಅದೇ ಮಾದರಿಯ ಹೆಸರು ಇಡಲಾಗಿದೆ.