

ಪಡುಬಿದ್ರಿ: ಕಾಪು ತಾಲೂಕಿನಲ್ಲಿ ಗುರುವಾರ ಸಂಜೆಯಿಂದ ಸುರಿಯುತ್ತಿದ್ದ ಬಿರುಸಿನ ಗಾಳಿ ಮಳೆಗೆ ಕೆಲವೆಡೆ ತಗ್ಗು ಪ್ರದೇಶದಲ್ಲಿ ಮನೆಗಳು ಜಲಾವೃತವಾಗಿ ಜನ ಸಂಕಷ್ಟ ಅನುಭವಿಸಿದರು.
ತಾಲೂಕಿನ ಪಲಿಮಾರು ಗ್ರಾಮದ ಅಡ್ವೆ ಬೈಲು ತೋಟ, ಪೂಂಜಮಾರು, ಕಾಪು ಪುರಸಭೆ ವ್ಯಾಪ್ತಿಯ ಮಲ್ಲಾರು ಗರಡಿ, ಬಡಗರಗುತ್ತು, ಬೆಳಪು ಮೂಳೂರು ರಸ್ತೆ ಪ್ರದೇಶಗಳು ಜಲಾವೃತವಾಗಿದ್ದು, ಕೆಲ ಮನೆಗಳಿಗೆ ನೀರು ನುಗ್ಗಿತ್ತು. ಗರಡಿ ವಾರ್ಡ್‌ನಲ್ಲಿ ರಾಜಕಾಲುವೆ ಹಾಗೂ ತೋಡುಗಳನ್ನು ಮಳೆಗಾಲದಲ್ಲಿಯೇ ಹೂಳೆತ್ತಿದ ಪರಿಣಾಮ ನೆರೆ ನೀರು ಸರಾಗವಾಗಿ ಹರಿದು ತೊಂದರೆ ತಪ್ಪಿದೆ.
ಕಾಪು ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಮುಖ್ಯಾಧಿಕಾರಿ ನಾಗರಾಜ್ ಸಿ., ಸದಸ್ಯರಾದ ವಿದ್ಯಾಲತಾ ಸುವರ್ಣ, ಉಮೇಶ್ ಕರ್ಕೇರ, ಶೈಲೇಶ್ ಅಮೀನ್ ಮೊದಲಾದವರು ನೆರೆ, ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿ, ತಾತ್ಕಾಲಿಕ ಪರಿಹಾರ ಕ್ರಮಗಳನ್ನು ಕಲ್ಪಿಸಿದ್ದಾರೆ.
ಪಡುಬಿದ್ರಿ ಕಾರ್ಕಳ ರಾಜ್ಯ ಹೆದ್ದಾರಿ ನಂದಿಕೂರು ಕೈಗಾರಿಕಾ ಪ್ರದೇಶದ ಬಳಿ ಅಸಮರ್ಪಕ ತೋಡುಗಳ ನಿರ್ವಹಣೆಯಿಂದ ಹೆದ್ದಾರಿಯಲ್ಲಿ ನೀರು ಹರಿದು ವಾಹನ ಸವಾರರು ಸಂಕಷ್ಟ ಅನುಭವಿಸಿದರು. ಶುಕ್ರವಾರ ಮಧ್ಯಾಹ್ನದವರೆಗೆ ತುಸು ವಿರಾಮಗೊಂಡ ಮಳೆ ಮಧ್ಯಾಹ್ನ ನಂತರ ಮತ್ತೆ ಬಿರುಸುಗೊಂಡಿತು. ಮಳೆಯಿಂದ ವಿವಿಧೆಡೆ ವಿದ್ಯುತ್ ಕಂಬಗಳು ಬಿದ್ದು ವಿದ್ಯುತ್ ಕಡಿತಗೊಂಡಿತ್ತು. ರಾಷ್ಟ್ರೀಯ ಹೆದ್ದಾರಿ 66ರ ವಿವಿಧೆಡೆ ಅಳವಡಿಸಿದ್ದ ಜಾಹೀರಾತು ಫಲಕಗಳು ಉರುಳಿ ಬಿದ್ದಿದ್ದು, ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಬ್ರಹ್ಮಕಲಶೋತ್ಸವಕ್ಕಾಗಿ ಬೀದಿ ದೀಪ ಅಲಂಕರಾಕ್ಕಾಗಿ ಹಾಕಿದ್ದ ಅಡಕೆ ಕಂಬಗಳನ್ನು ತೆರವುಗೊಳಿಸದ ಪರಿಣಾಮ ಅಲ್ಲಲ್ಲಿ ಉರುಳಿ ಬೀಳುತ್ತಿದ್ದು, ಸಂಚಾರಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ.