ಪ್ರೇಯಸಿನಾ ಅಥವಾ ಪಾಕ್​ ಏಜೆಂಟಾ? ವಿಚಾರಣೆ ವೇಳೆ ಅನುಮಾನ ಮೂಡಿಸಿದ ಸೀಮಾ ನಡೆ

Pak seema
Published on

ನವದೆಹಲಿ: ಪ್ರಿಯಕರನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದು ನೆಲೆಸಿರುವ ಸೀಮಾ ಹೈದರ್​ ಮೇಲೆ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿವೆ. ಈಕೆ ನಿಜವಾಗಿಯೂ ಪ್ರೀತಿಯನ್ನು ಅರಸಿ ಬಂದಿದ್ದಾಳಾ? ಅಥವಾ ಪಾಕಿಸ್ತಾನದ ಏಜೆಂಟ್​ ಇರಬಹುದಾ? ಎಂಬ ಸಂಶಯ ವ್ಯಕ್ತವಾಗಿದ್ದು, ಆಕೆಯ ನಡೆ ದಿನದಿಂದ ದಿನಕ್ಕೆ ನಿಗೂಢತೆಯನ್ನು ಹೆಚ್ಚಿಸುತ್ತಿದೆ. ಇದರ ನಡುವೆ ನಿನ್ನೆ (ಜು.18) ಉತ್ತರ ಪ್ರದೇಶದ ಭಯೋತ್ಪಾದನಾ ವಿರೋಧಿ ಪಡೆ ಸೀಮಾಳನ್ನು ಸುಮಾರು 9 ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ಸೋಮವಾರ (ಜು. 17) 8 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು.

ಹಲವು ಪಬ್​ಜಿ ಖಾತೆಗಳು

ನಾಲ್ಕು ಮಕ್ಕಳ ತಾಯಿಯಾಗಿರುವ ಸೀಮಾ ಕುರಿತು ಕೆಲವು ಕುತೂಹಲಕಾರಿ ಮಾಹಿತಿ ಹೊರಬಿದ್ದಿದೆ. ಪಬ್ಜಿ ಆಡುವಾಗ ಭಾರತೀಯ ಮೂಲದ ಸಚಿನ್​ ಎಂಬ ಯುವಕನ ಪ್ರೀತಿಯ ಬಲೆಗೆ ಬಿದ್ದು ಆತನಿಗಾಗಿ ಬಂದಿರುವುದಾಗಿ ಹೇಳಿಕೊಳ್ಳುತ್ತಿರುವ ಸೀಮಾ, ತನ್ನ ಹೆಸರಿನಲ್ಲಿ ಅನೇಕ ಪಬ್​ಜಿ ಖಾತೆಗಳನ್ನು ಹೊಂದಿದ್ದು, ಈ ಹಿಂದೆ ದೆಹಲಿ ಮೂಲದ ಅನೇಕ ಯುವಕರನ್ನು ಪರಿಚಯಿಸಿಕೊಳ್ಳುವ ಪ್ರಯತ್ನ ಮಾಡಿದ್ದಾಳೆ ಎಂದು ಅನೇಕ ಮಾಧ್ಯಮಗಳು ವರದಿ ಮಾಡಿವೆ.

ಪಾಕ್​ ಸೇನೆಯಲ್ಲಿ ಸೀಮಾ ಚಿಕ್ಕಪ್ಪ

ಇನ್ನು ಆಕೆಯ ಪಾಕಿಸ್ತಾನಿ ಗುರುಚಿತ ಚೀಟಿ ತೀರಾ ಇತ್ತೀಚಿನದು ಮತ್ತು 2022ರಲ್ಲಿ ಅದನ್ನು ಮಾಡಲಾಗಿದೆ. ಕೆಲವು ಇಂಗ್ಲಿಷ್​ ಸಾಲುಗಳನ್ನು ಓದಲು ತನಿಖಾಧಿಕಾರಿಗಳು ಹೇಳಿದಾಗ, ಆಕೆ ಸ್ಪಷ್ಟವಾಗಿ ಮತ್ತು ಹರಳು ಹುರಿದಂತೆ ಪಟಪಟನೆ ಓದಿದ್ದಾಳೆ. ಆದರೆ, ತಾನು ಐದನೇ ತರಗತಿ ಮಾತ್ರ ಓದಿದ್ದೇನೆ ಎಂದು ಈ ಹಿಂದೆ ಹೇಳಿಕೊಂಡಿದ್ದಾಳೆ. ಕೆಲವು ವರದಿಗಳ ಪ್ರಕಾರ, ಸೀಮಾ ಹೈದರ್​ ಚಿಕ್ಕಪ್ಪ ಪಾಕಿಸ್ತಾನದ ಸೇನೆಯಲ್ಲಿದ್ದಾರೆಂದು ತಿಳಿದುಬಂದಿದೆ. ಅಲ್ಲದೆ, ಆಕೆಯ ಸಹೋದರ ಆರ್ಮಿ ಸೇರಲು ತಯಾರಿ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಪರಿಚಯ ಹೇಗಾಯ್ತು?

ಸೀಮಾ, ಭಾರತಕ್ಕೆ ಅಕ್ರಮವಾಗಿ ಪ್ರವೇಶ ಮಾಡಿರುವ ಸಂಬಂಧ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಕಳೆದ ಮೇ ತಿಂಗಳಲ್ಲಿ ಸೀಮಾ ತನ್ನ ನಾಲ್ವರು ಮಕ್ಕಳೊಂದಿಗೆ ಕಠ್ಮಂಡುವಿನಿಂದ ದೆಹಲಿಗೆ ಬಸ್‌ನಲ್ಲಿ ಪ್ರಯಾಣಿಸಿ, ಅಲ್ಲಿಂದ ಗ್ರೇಟರ್​ ನೋಯ್ಡಾಗೆ ಬಂದು ತನ್ನ ಪ್ರಿಯಕರನ್ನು ಸೇರಿದ್ದಾಳೆ. ಸೀಮಾ ಮತ್ತು ಸಚಿನ್ ಮೀನಾ ಅವರು 2019 ರಲ್ಲಿ PUBG ಆಡುವಾಗ ಮೊದಲು ಪರಿಚಯವಾಯಿತು ಎಂದು ಹೇಳಿಕೊಂಡಿದ್ದಾರೆ. ಸೀಮಾ ಭಾರತಕ್ಕೆ ಬಂದ ಬಳಿಕ ಪಶುಪತಿನಾಥ ದೇವಸ್ಥಾನದಲ್ಲಿ ಇಬ್ಬರು ವಿವಾಹವಾದೆವು ಎಂದು ಸಚಿನ್​ ಹೇಳಿಕೆ ನೀಡಿದ್ದಾನೆ. ಮೀನಾ ಕುಟುಂಬವು ಸೀಮಾಳ ಜತೆ ಆಕೆಯ ನಾಲ್ವರು ಮಕ್ಕಳನ್ನು ಒಪ್ಪಿಕೊಂಡು ತಮ್ಮ ಜತೆ ಇರಿಸಿಕೊಂಡಿದ್ದಾರೆ.

ಜುಲೈ 4 ರಂದು ಗ್ರೇಟರ್ ನೋಯ್ಡಾ ಪೊಲೀಸರು ಸೀಮಾ, ಸಚಿನ್ ಮತ್ತು ಸಚಿನ್ ಅವರ ತಂದೆಯನ್ನು ಬಂಧಿಸಿದ್ದರು. ಆದರೆ, ಜುಲೈ 7ರಂದು ಮೂವರಿಗೆ ಜಾಮೀನು ಮಂಜೂರಾಗಿದ್ದು, ಜೈಲಿನಿಂದ ಬಿಡುಗಡೆಯಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net