

ಡೀಸೆಲ್ ದರ ಏರಿಕೆ ಖಂಡಿಸಿ ಏಪ್ರಿಲ್ 15 ರಿಂದ ಲಾರಿ ಮಾಲೀಕರ ಸಂಘ ಮುಷ್ಕರಕ್ಕೆ ಕರೆ ನೀಡಿದೆ. ಆ ದಿನ ರಾಜ್ಯಾದ್ಯಂತ ಎಲ್ಲಾ ಲಾರಿಗಳ ಸಂಚಾರ ಸ್ಥಗಿತಗೊಳ್ಳಲಿದ್ದು, ಗೂಡ್ಸ್ ವಾಹನಗಳು, ಟ್ರಾನ್ಸ್ಪೋರ್ಟ್ ವಾಹನಗಳು ಸಹ ಸಂಪೂರ್ಣ ಬಂದ್ ಆಗಲಿವೆ.
Strike | ಈಗಾಗಲೇ ರಾಜ್ಯದಲ್ಲಿ ಹಾಲು, ವಿದ್ಯುತ್, ಬಸ್ ದರ, ಮೆಟ್ರೋ ದರ ಸೇರಿ ಡೀಸೆಲ್ ದರವನ್ನೂ ಏರಿಕೆ ಮಾಡಿ ಕರ್ನಾಟಕ ಸರ್ಕಾರ ಜನರ ಟೀಕೆಗೆ ಗುರಿಯಾಗಿದೆ. ಈ ಬೆನ್ನಲ್ಲೇ ಲಾರಿ ಮಾಲೀಕರ ಸಂಘ ಡೀಸೆಲ್ ಬೆಲೆ ಏರಿಕೆ ವಿರುದ್ಧ ಹೋರಾಟಕ್ಕೆ ಕರೆ ನೀಡಿದೆ.
ರಾಜ್ಯ ಸರ್ಕಾರ ಡೀಸೆಲ್ ಮೇಲಿನ ದರವನ್ನು ಏರಿಕೆ ಮಾಡಿದ್ದು, ಈ ಏರಿಕೆಯನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿ ಲಾರಿ ಮಾಲೀಕರು ಏಪ್ರಿಲ್ 15 ರಂದು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈ ಸಂಬಂಧ ಲಾರಿ ಮಾಲೀಕರು ಸಭೆ ನಡೆಸಿ ತೀರ್ಮಾನ ಕೈಗೊಂಡಿದ್ದು, ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ.
ಇನ್ನೂ ಈ ಬಗ್ಗೆ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಮಾತನಾಡಿದ್ದು, ಎಲ್ಲಾ ರೀತಿಯ ಲಾರಿಗಳ ಸಂಚಾರ ಸ್ಥಗಿತಗೊಳಿಸಲಿದ್ದೇವೆ, ನಮ್ಮಗಳ ಬೇಡಿಕೆಯನ್ನು ಈಡೇರಿಸುವವರೆಗೂ ಲಾರಿಗಳ ಸಂಚಾರ ಬಂದ್ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ. ಜಲ್ಲಿ ಕಲ್ಲು ಲಾರಿ, ಮರಳು ಲಾರಿ, ಗೂಡ್ಸ್ ವಾಹನಗಳು, ಅಕ್ಕಿ ಲಾರಿ ಜೊತೆಗೆ ಏರ್ ಪೋರ್ಟ್ ಟ್ಯಾಕ್ಸಿ ಸೇರಿದಂತೆ ಸುಮಾರು 6 ಲಕ್ಷ ಲಾರಿಗಳು ತಮ್ಮ ಕೆಲಸವನ್ನು ನಿಲ್ಲಿಸಲಿವೆ ಎಂದು ಹೇಳಿದ್ದಾರೆ.
ಲಾರಿ ಚಾಲಕರ ಸಂಘದಿಂದ ಈ ಸಂಬಂಧ ನಿರ್ಧಾರ ತೆಗೆದುಕೊಳ್ಳುತ್ತಿದ್ದು, ಬೇರೆ ರಾಜ್ಯದಿಂದಲೂ ಕರ್ನಾಟಕದ ಒಳಗೆ ವಾಹನಗಳು ಬರುವಂತಿಲ್ಲ. ಎಲ್ಲಾ ಬಾರ್ಡರ್ ಚೆಕ್ ಪೋಸ್ಟ್ಗಳಲ್ಲಿ ನಿಂತು ವಾಹನಗಳನ್ನು ನಿಲ್ಲಿಸಿ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ. ನಾವುಗಳೆಲ್ಲರೂ ಏಪ್ರಿಲ್ 14 ರ ವರೆಗೆ ಸರ್ಕಾರಕ್ಕೆ ಸಮಯ ಕೊಡುತ್ತಿದ್ದೇವೆ. ಏ.15ರ ರಾತ್ರಿಯಿಂದಲೇ ಹೋರಾಟ ಶುರುವಾಗಲಿದೆ, ಗೂಡ್ಸ್ ಟ್ರಾನ್ಸ್ಪೋರ್ಟ್ ಸಂಪೂರ್ಣ ಬಂದ್ ಆಗಲಿದೆ. ಪೆಟ್ರೋಲಿಯಂ ಅಸೋಸಿಯೇಷನ್ ಚಾಲಕರ ಸಂಘ ಬೆಂಬಲ ಸೂಚಿಸಿದೆ. ಯಾವುದೇ ರಾಜ್ಯದಿಂದ ಕರ್ನಾಟಕದ ಒಳಗೆ ವಾಣಿಜ್ಯ ವಾಹನ ಸಂಚಾರ ಮಾಡಲು ಬಿಡಲ್ಲ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಮಾಹಿತಿ ನೀಡಿದ್ದಾರೆ.