

ಕಾಸರಗೋಡು: ಪಳ್ಳಿಕೆರೆ ಸಮೀಪದ ಪೂಚಕ್ಕಾಡಿನಲ್ಲಿ ಲಾರಿ ಮತ್ತು ಸ್ಕೂಟರ್ ಡಿಕ್ಕಿಯಾಗಿ ಸ್ಕೂಟರ್ ಸವಾರ, ವಿದ್ಯಾರ್ಥಿ ಚೆರ್ವತ್ತೂರು ಕಾಡಂಗೋಡು ನಿವಾಸಿ ಎ.ಪಿ ಮಹಮ್ಮದ್ ಫಾಯಿಸ್(23)ಮೃತಪಟ್ಟಿದ್ದಾರೆ. ಹಿಂಬದಿ ಸವಾರ, ಸಹಪಾಠಿ ಚಿತ್ತಾರಿ ನಿವಾಸಿ ರಯೀಸ್ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳೂರಿನಿಂದ ಮಹಮ್ಮದ್ ಫಾಯಿಸ್ ಅವರ ಸ್ಕೂಟರ್‌ನಲ್ಲಿ ರಯೀಸ್ ಜತೆ ಮನೆಗೆ ಆಗಮಿಸುತ್ತಿದ್ದಾಗ ಶನಿವಾರ ಬೆಳಗ್ಗೆ 3ರ ಜಾವದಲ್ಲಿ ಅಪಘಾತ ನಡೆದಿದೆ. ತಕ್ಷಣ ಇಬ್ಬರನ್ನೂ ಕಾಞಂಗಾಡಿನ ಆಸ್ಪತ್ರೆಗೆ ದಾಖಲಿಸಿದರೂ ಮಹಮ್ಮದ್ ಫಾಯಿಸ್ ಜೀವ ಉಳಿಸಲಾಗಿಲ್ಲ. ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.