

ಶಿವಮೊಗ್ಗ: ಸಂಸಾರದ ಸಾಗರವನ್ನು ದಾಟಬೇಕಾದರೆ ಭಗವಂತನ ಪಾದವೇ ನೌಕೆ ಎಂದು ಉತ್ತರಾದಿಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು ಬಣ್ಣಿಸಿದರು.
ಹೊಳೆಹೊನ್ನೂರಿನಲ್ಲಿ ಭಾನುವಾರ ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ವಿದ್ವತ್ ಸಭೆಯಲ್ಲಿ ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದ ಅವರು, ದೇವರ ಪಾದವನ್ನೇ ನೌಕೆಯಾಗಿಸಿಕೊಂಡು ನಾವು ದಾಟಬೇಕಿರುವುದರಿಂದ ದೇವರ ಬಗ್ಗೆ ನಂಬಿಕೆ ಇಡುವುದು ಮುಖ್ಯ. ಯಾವ ಅಪೇಕ್ಷೆ ಇಲ್ಲದೆ ದೇವರ ಸೇವೆ ಮಾಡಬೇಕು. ಇಷ್ಟಾರ್ಥಕ್ಕಾಗಿ ದೇವರಲ್ಲಿ ಭಕ್ತಿ ಮಾಡುವವರಿಗೆ ಸ್ವಾಭಾವಿಕವಾದ ಭಕ್ತಿ ಇರುವುದಿಲ್ಲ. ದೇವರ ಉಪಕಾರ ಸ್ಮರಣೆ ಮಾಡಿಕೊಳ್ಳುತ್ತ ಸ್ವಾಭಾವಿಕವಾದ ಭಕ್ತಿ ಮಾಡಬೇಕು. ಆಗ ದೇವರು ಮೋಕ್ಷವನ್ನೇ ಕೊಡುತ್ತಾನೆ ಎಂದರು.
ಪಂ. ಭೀಮಸೇನಾಚಾರ್ಯ ಆತಕೂರು ಪ್ರವಚನ ನೀಡಿದರು. ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಪಂ. ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಪ್ರಕಾಶಾಚಾರ್ ಸವಣೂರು ಉಪಸ್ಥಿತರಿದ್ದರು.