

ಕಡೂರು: ಜಾತಿ ವ್ಯವಸ್ಥೆಯನ್ನು ಮೀರಿ ಕಾಯಕ ತತ್ವದಡಿ ಬದುಕಿ ಜೀವನವನ್ನು ದೇವರು ಎಂದು ನಂಬಿದವರು 12ನೇ ಶತಮಾನದ ಶರಣರು ಎಂದು ಚಿಂತಕ ಕುಂಕನಾಡು ಬಸವರಾಜಪ್ಪ ಹೇಳಿದರು.
ಅಣ್ಞೀಗೆರೆ ಗ್ರಾಮದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್, ತಾಲೂಕು ಕದಳಿ ಮಹಿಳಾ ವೇದಿಕೆ ಮತ್ತು ಜಿಲ್ಲಾ ಸಿರಿಗನ್ನಡ ವೇದಿಕೆ ಹಾಗೂ ಯಶ್ವಸಿನಿ ಯೋಗ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಶರಣರ ಬೆಳದಿಂಗಳು ಕಾರ್ಯಕ್ರಮದಲ್ಲಿ ಮಾತನಾಡಿ, 12ನೇ ಶತಮಾನದ ಶರಣರ ಬದುಕಿನ ಮಾದರಿಯಲ್ಲಿ ಬದುಕಿ ಬಾಳಿದವರು ಸಿದ್ಧಗಂಗ ಮಠದ ಶ್ರೀಶಿವಕುಮಾರ ಶ್ರೀಗಳು, ತ್ರಿವಿಧ ದಾಸೋಹಿ ಎಂದು ಹೆಸರು ಪಡೆದು ಲಕ್ಷಾಂತರ ಬಡ ವಿದ್ಯಾರ್ಥಿಗಳ ಆಶಾಕಿರಣವಾಗಿ ಅನ್ನದಾಸೋಹದ ಜತೆಗೆ ಅಕ್ಷರ ದಾಸೋಹದ ಮೂಲಕ ಜನರಲ್ಲಿ ಸಂಸ್ಕೃತಿ ಸಂಸ್ಕಾರ ಬಿತ್ತಿ ಬೆಳೆಸಿದರು ಎಂದು ತಿಳಿಸಿದರು.
ಗಂಗಾಧರ ಶಿವಪುರ ಮಾತನಾಡಿ, ಅಲ್ಲಮಪ್ರಭು ದೇವರು ಅನುಭವ ಮಂಟಪದ ಶೂನ್ಯ ಸಿಂಹಾಸನದ ಅಧ್ಯಕ್ಷರಾಗಿ ಶರಣ ತತ್ವ ಚಿಂತನೆಗಳನ್ನು ಜನಮಾನಸಕ್ಕೆ ಮುಟ್ಟಿಸುವ ಕೆಲಸ ಮಾಡಿದರು. ಜನರಲ್ಲಿರುವ ಮೌಢ್ಯಗಳನ್ನು, ಕೆಟ್ಟ ಸಂಪ್ರದಾಯಗಳನ್ನು ದೂರ ಮಾಡುವ ಕೆಲಸ ಮಾಡಿದರು ಮತ್ತು ಅದಕ್ಕೆ ಪೂರಕವಾದ ವಚನಗಳ ಮೂಲಕ ಜನರಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸಿದರು ಎಂದರು.
ಯಳನಡು ಮಹಾಸಂಸ್ಥಾನ ಮಠದ ಜ್ಞಾನಪ್ರಭು ಸಿದ್ಧರಾಮ ದೇಶೀಕೇಂದ್ರ ಸ್ವಾಮೀಜಿ, ಯಶಸ್ವಿನಿ ಯೋಗ ಸಂಸ್ಥೆ ಅಧ್ಯಕ್ಷ ಎ.ಎಂ.ಕುಮಾರಪ್ಪ, ಜಿಲ್ಲಾ ಸಿರಿಗನ್ನಡ ವೇದಿಕೆಯ ಅಧ್ಯಕ್ಷ ಎಂ.ಆರ್.ಪ್ರಕಾಶ್, ಯೋಗ ಗುರುಗಳಾದ ಬಿ.ಸಿ. ದೇವೇಂದ್ರಪ್ಪ ,ಯಗಟಿಪುರ ಪ್ರಸನ್ನ, ಸುಜಾತ ಜಡೆಮಲ್ಲಪ್ಪ, ಗರ್ಜೆ ರಾಜಣ್ಣ, ಆಲದಹಳ್ಳಿ ಮಹೇಶ್ವರಪ್ಪ, ಕುಂಕನಾಡು ನಾಗರಾಜಪ್ಪ, ಎ.ಎಂ ಶಿವಕುಮಾರ್, ಎಸ್.ಬಿ.ರಾಜಣ್ಣ, ಯಗಟಿ ಸತೀಶ್, ಅರೇಹಳ್ಳಿಮೋಹನ್ ಕುಮಾರ್, ಆಶಾಪ್ರಭು, ರುದ್ರಪ್ಪ, ಸುರೇಶ್ ಮತ್ತಿತರಿದ್ದರು.