ಲೋಕಾಯುಕ್ತ ಬಲಗೊಳ್ಳಲಿ, ಭ್ರಷ್ಟಾಚಾರಕ್ಕೆ ಕಡಿವಾಣ ಬೇಕು...

sdfsdfsdfas
Published on

ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ಬುಧವಾರ ರಾಜ್ಯದ ಸುಮಾರು 60 ಕಡೆಗಳಲ್ಲಿ 15 ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಈ ಸಂದರ್ಭದಲ್ಲಿ ಅಪಾರ ಪ್ರಮಾಣದ ನಗ-ನಗದು ಹಾಗೂ ಆಸ್ತಿಪತ್ರಗಳು ಪತ್ತೆಯಾಗಿವೆ. ಸಂಬಂಧಿಸಿದ ಅಧಿಕಾರಿಗಳು ಈ ಆಸ್ತಿ ಮತ್ತು ಇತರ ಸಂಪತ್ತಿನ ಕುರಿತಂತೆ ಲೆಕ್ಕಪತ್ರ ಹಾಗೂ ದಾಖಲೆ ನೀಡಬೇಕಾಗುತ್ತದೆ. ಇದರ ಆಧಾರದ ಮೇಲೆ ಎಸಿಬಿ ಮುಂದಿನ ಹೆಜ್ಜೆಗಳನ್ನು ನಿರ್ಧರಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸುವುದು ಇತ್ಯಾದಿ ಕ್ರಮಗಳನ್ನು ಮುಂದುವರಿಸುತ್ತದೆ.

ಆಡಳಿತಶಾಹಿಯನ್ನು ಎಚ್ಚರದಿಂದ ಇರಿಸುವ ಸಲುವಾಗಿ, ಆಡಳಿತದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮತ್ತು ಜನರಿಗೆ ಸುಲಭ ಸೇವೆ ಸಿಗುವಂತಾಗುವಲ್ಲಿ, ಭ್ರಷ್ಟಾಚಾರ ನಿಗ್ರಹದ ಹೊಣೆ ಹೊತ್ತ ಸಂಸ್ಥೆಗಳು ಇಂಥ ಕ್ರಮಗಳನ್ನು ಆಗೀಗ ತೆಗೆದುಕೊಳ್ಳುತ್ತ ಇರಬೇಕಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಇಲ್ಲವಾದಲ್ಲಿ ಅಡಳಿತಶಾಹಿ ಜಡ್ಡುಗಟ್ಟುತ್ತದೆ. ಆದರೆ ಜನಸಾಮಾನ್ಯರಲ್ಲಿ ಒಂದು ಸಂದೇಹವಿದೆ. ಅಧಿಕಾರಿಗಳ ಮೇಲೆ ದಾಳಿ, ಆಸ್ತಿ, ಹಣ ಪತ್ತೆ ಎಂದೆಲ್ಲ ಸುದ್ದಿಗಳು ಆಗಾಗ ಬರುತ್ತವೆ. ಆದರೆ ಮುಂದೇನಾಯಿತು? ಆರೋಪಿಗಳಿಗೆ ಶಿಕ್ಷೆ ಏನಾದರೂ ಆಯಿತಾ? ಅಥವಾ ಖುಲಾಸೆ ಆಯಿತಾ ಎಂಬೆಲ್ಲ ಮಾಹಿತಿ ತಿಳಿಯುವುದೇ ಇಲ್ಲ ಎಂಬುದು ಜನರ ಆಕ್ಷೇಪ. ಹಾಗೆನೋಡಿದರೆ, ಎಸಿಬಿ ದಾಖಲಿಸುವ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಬಹಳ ಕಡಿಮೆ ಇದೆ. ಇದಕ್ಕೆ ಬೇರೆ ಬೇರೆ ಕಾರಣಗಳಿವೆ ಎಂಬುದು ನಿಜವಾದರೂ, ಮೂಲ ದಲ್ಲಿ ಎಸಿಬಿಗೆ ನೀಡಲಾಗಿರುವ ಅಧಿಕಾರವೂ ಸೀಮಿತ ಎಂಬ ಸಂಗತಿಯನ್ನು ಕಡೆಗಣಿಸಲಾಗದು. ನಮ್ಮಲ್ಲಿ ಹಿಂದೆ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯಾಗಿ ಲೋಕಾಯುಕ್ತ ಇತ್ತು. ಆ ಸಂಸ್ಥೆ ಯಾವ ರೀತಿಯಲ್ಲಿ ಕೆಲಸ ಮಾಡುತ್ತಿತ್ತು ಎಂಬುದು ರಾಜ್ಯದ ಜನರಿಗೆ ಚೆನ್ನಾಗಿ ಗೊತ್ತಿದೆ.

ಲೋಕಾಯುಕ್ತ ಹೆಸರು ಕೇಳಿದರೆ ಸಾಕು, ಭ್ರಷ್ಟ ಅಧಿಕಾರಿ-ಸಿಬ್ಬಂದಿಗೆ ನಡುಕ ಉಂಟಾಗು ವಂತಹ ವಾತಾವರಣ ನಿರ್ವಣವಾಗಿತ್ತು. ಮಾಧ್ಯಮಗಳಲ್ಲಿ ಲೋಕಾಯುಕ್ತ ದಾಳಿ ವರದಿಗಳು ಆಗಾಗ ಪ್ರಕಟವಾಗುತ್ತಲೇ ಇರುತ್ತಿದ್ದವು. ಜತೆಗೆ, ಜನಸಾಮಾನ್ಯರ ಆರೋಗ್ಯ, ಮೂಲಸೌಕರ್ಯ ಸಮಸ್ಯೆ ಇತ್ಯಾದಿ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ಲೋಕಾಯುಕ್ತ ತನ್ನ ಕಾರ್ಯಕ್ಕೆ ಹೊಸ ಆಯಾಮ ಸೇರಿಸಿಕೊಂಡಿತ್ತು. ನಂತರದಲ್ಲಿ ಲೋಕಾಯುಕ್ತವನ್ನು ದುರ್ಬಲಗೊಳಿಸಿ ಎಸಿಬಿಯನ್ನು ಸ್ಥಾಪಿಸಲಾಯಿತು. ಲೋಕಾಯುಕ್ತಕ್ಕೆ ಪೊಲೀಸ್ ಅಧಿಕಾರ ಇತ್ತು, ಆರೋಪಿತರನ್ನು ಬಂಧಿಸುವ ಸ್ವಾತಂತ್ರ್ಯ ಇತ್ತು. ಆದರೆ ಎಸಿಬಿಗೆ ಆ ಅಧಿಕಾರ ಇಲ್ಲ. ಲೋಕಾಯುಕ್ತಕ್ಕೆ ಸ್ವಾಯತ್ತತೆ ಇದ್ದರೆ, ಎಸಿಬಿ ಸರ್ಕಾರದ ಕೆಳಗೆ ಕಾರ್ಯನಿರ್ವಹಿಸಬೇಕಾಗುತ್ತದೆ.

ಹೀಗಾಗಿ ಎಸಿಬಿಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂಬ ಆಕ್ಷೇಪ ಮೊದಲಿಂದಲೂ ಇದೆ. ಹೀಗಾಗಿ ಲೋಕಾಯುಕ್ತವನ್ನೇ ಬಲಪಡಿಸುವುದು ಲೇಸು ಎಂಬ ಬಲವಾದ ಆಗ್ರಹವೂ ಇದೆ. ಈಗಲೂ ಲೋಕಾಯುಕ್ತ ಇದೆಯಾದರೂ ಅದು ಹೆಸರಿಗಷ್ಟೆ ಆಗಿದೆ. ಜನರಿಗೆ ಪಾರದರ್ಶಕವಾಗಿ, ಸುಲಭದಲ್ಲಿ, ಭ್ರಷ್ಟಾಚಾರಕ್ಕೆ ಆಸ್ಪದ ಆಗದಂತೆ ಸೇವೆ ನೀಡುವುದು ಸರ್ಕಾರಗಳ ಕರ್ತವ್ಯ. ಈಗಿನ ಆಡಳಿತಾರೂಢ ಬಿಜೆಪಿಯು ಎಸಿಬಿಯನ್ನು ರದ್ದುಪಡಿಸಿ ಲೋಕಾಯುಕ್ತವನ್ನು ಮರಳಿ ಸ್ಥಾಪಿಸುವ ಭರವಸೆ ನೀಡಿತ್ತು. ಹೀಗಾಗಿ, ಲೋಕಾಯುಕ್ತಕ್ಕೆ ಮರಳಿ ಬಲತುಂಬುವ ದಿಕ್ಕಿನಲ್ಲಿ ಹೆಜ್ಜೆಮುಂದಿಡಲು ಇದು ಸಕಾಲ ಎಂಬ ಜನರ ಭಾವನೆಯನ್ನು ಆಳುಗರು ಗಣನೆಗೆ ತೆಗೆದುಕೊಳ್ಳಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net