

ಸುಬ್ರಹ್ಮಣ್ಯ: ಶ್ರೀನಿಕೇತನ ಟ್ರಸ್ಟ್ ಸುಬ್ರಹ್ಮಣ್ಯ ಮತ್ತು ಶ್ರೀನಿಕೇತನ ವಸ್ತುಸಂಗ್ರಹಾಲಯ ಮತ್ತು ಕೆಳದಿ ರಾಣಿ ಚೆನ್ನಮ್ಮಾಜಿ ಅಧ್ಯಯನ ಪೀಠ ಕುಕ್ಕೆ ಸುಬ್ರಹ್ಮಣ್ಯ ವತಿಯಿಂದ ಲೋಕಕಲ್ಯಾಣಾರ್ಥವಾಗಿ ವಸಿಷ್ಠ ಕೃತ ಸಕಲ ರೋಗ ಹರ, ದಾರಿದ್ರೃ ನಾಶ ಶಿವಸ್ತುತಿ ಲೇಖನ ಮತ್ತು ಶಿವಸಹಸ್ರನಾಮ ಪಾರಾಯಣ ಯಜ್ಞ ನೆರವೇರಲಿದೆ ಎಂದು ಸುಬ್ರಹ್ಮಣ್ಯ ಮಠದ ಶ್ರೀ ಡಾ.ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಲೋಕ ಕಲ್ಯಾಣಾರ್ಥವಾಗಿ ರಾಷ್ಟ್ರದಲ್ಲೇ ಇದೇ ಮೊದಲ ಬಾರಿಗೆ ಯಜ್ಞ ನೆರವೇರಲಿದೆ. 2025ರ ಶಿವರಾತ್ರಿಯಿಂದ 2026 ಶಿವರಾತ್ರಿ ತನಕ ನಿರಂತರವಾಗಿ ಒಂದು ವರ್ಷ ದಾರಿದ್ರನಾಶಕ ಶಿವಸ್ತುತಿ ಲೇಖನ ಹಾಗೂ ಶಿವಸಹಸ್ರನಾಮ ಪಾರಾಯಣ ಯಜ್ಞ ಸುಬ್ರಹ್ಮಣ್ಯದಲ್ಲಿ ನಡೆಯಲಿದೆ. ಶಿವ ಭಕ್ತರು ಬರೆದು ಕೊಡುವ ಶಿವಸ್ತುತಿಯನ್ನು ಶಿವಸಹಸ್ರನಾಮ ಮಹಾಯಾಗದ ಹೋಮಕ್ಕೆ ಅರ್ಪಿಸಲಾಗುವುದು. ಹೋಮ ನಡೆಯುವ ಸ್ಥಳ, ಸಮಯ, ದಿನಾಂಕ ಹಾಗೂ ಶಿವಸ್ತುತಿ ಸ್ತೋತ್ರ, ಶಿವಸಹಸ್ರನಾಮ ಸ್ತೋತ್ರ, ಇತರ ವಿವರಗಳನ್ನು ಶೀಘ್ರ ತಿಳಿಸಲಾಗುವುದು.
ಶ್ರೀನಿಕೇತನ ವಸ್ತುಸಂಗ್ರಹಾಲಯ ಮತ್ತು ಕೆಳದಿ ರಾಣಿ ಚೆನ್ನಮ್ಮಾಜಿ ಅಧ್ಯಯನ ಪೀಠ ಕುಕ್ಕೆ ಸುಬ್ರಹ್ಮಣ್ಯ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಕೆಳದಿ ಅರಸರ ಕೊಡುಗೆ ಎಂಬ ವಿಷಯವಾಗಿ ಎರಡು ದಿನಗಳ ರಾಜ್ಯಮಟ್ಟದ ಐತಿಹಾಸಿಕ ಸಮ್ಮೇಳನ ಫೆ.22,23ರಂದು ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಕಾರ್ಯಕ್ರಮದ ಆಮಂತ್ರಣ ಬಿಡುಗಡೆಗೊಳಿಸಿದರು. ಶ್ರೀ ನಿಕೇತನ ವಸ್ತುಸಂಗ್ರಹಾಲಯ ಮತ್ತು ಕೆಳದಿ ರಾಣಿ ಚೆನ್ನಮ್ಮಾಜಿ ಅಧ್ಯಯನ ಪೀಠದ ಸಂಸ್ಥಾಪಕ ನಿರ್ದೇಶಕ ಡಾ.ಜಿ.ವಿ.ಕಲ್ಲಾಪುರ ಮತ್ತು ಸಂಶೋಧನಾ ವಿದ್ಯಾರ್ಥಿ ಕಾರ್ತಿಕ್ ಶಗ್ರಿತ್ತಾಯ ಉಪಸ್ಥಿತರಿದ್ದರು.