ಸಾಸ್ತಾನ ಮೀನುಮಾರುಕಟ್ಟೆಗೆ ಲೋಕಾ ಭೇಟಿ

loka
ಸಾಸ್ತಾನ ಮೀನುಮಾರುಕಟ್ಟೆ ಕಳಪೆ ಕಾಮಗಾರಿ ಕುರಿತು ದೂರು ಸ್ವೀಕರಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು
Published on

ವಿಜಯವಾಣಿ ಸುದ್ದಿಜಾಲ ಕೋಟ

ಐರೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಸ್ತಾನ ಮೀನುಮಾರುಕಟ್ಟೆ ಕಳಪೆ ಕಾಮಗಾರಿ ಕುರಿತು ದೂರು ನೀಡಿದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮಧ್ಯಾಹ್ನ 3ಗಂಟೆ ತನಕ ಮೀನುಮಾರುಕಟ್ಟೆಯ ಕಟ್ಟಡಗಳ ಹಾಗೂ ಅಲ್ಲಿನ ಅವ್ಯವಸ್ಥೆ ಪರಿಶೀಲಿಸಿದ ಲೋಕಾಯುಕ್ತ ಅಧಿಕಾರಿಗಳು ನಿರ್ಮಿತಿ ಕೇಂದ್ರದ ಇಂಜಿನಿಯರ್ ಹಾಗೂ ಪಿಡಿಒವನ್ನು ತರಾಟೆ ತೆಗೆದುಕೊಂಡರು.

ಲೋಕಾಯುಕ್ತ ಅಧಿಕಾರಿಗಳಿದ್ದಲ್ಲಿಗೆ ಆಗಮಿಸಿದ ಮಹಿಳಾ ಮೀನುಗಾರರು ಅಧಿಕಾರಿಗಳ ಬಳಿ ತಮ್ಮ ಅಳಲು ತೋಡಿಕೊಂಡರು. ಮಹಿಳಾ ಮೀನುಗಾರರಿಗೆ ಸಿಗಬೇಕಿದ್ದ 19 ಒಣಮೀನು ಮಾರಾಟ ಮಳಿಗೆಗಳನ್ನು ಗ್ರಾಮ ಪಂಚಾಯಿತಿ ಏಲಂ ಮೂಲಕ ಖಾಸಗಿ ವ್ಯಾಪಾರಸ್ಥರಿಗೆ ಅಕ್ರಮವಾಗಿ ನೀಡಿದ್ದಾರೆ. ಕಟ್ಟಡದ ನೀಲಿನಕಾಶೆ ಪ್ರಕಾರ ಕಟ್ಟಡ ನಿರ್ಮಾಣವಾಗದೇ ಮಹಿಳಾ ವ್ಯಾಪಾರಸ್ಥರಿಗೆ ಕಷ್ಟವಾಗುತ್ತಿದೆ ಎಂದು ದೂರಿದರು.

ಮೀನುಮಾರುಕಟ್ಟೆ ಬಳಿಯಿದ್ದ ಚರಂಡಿ, ಶೌಚಗೃಹದ ದುಸ್ಥಿತಿ ವಿರುದ್ಧ ಅಧಿಕಾರಿಗಳು ಅಸಮಾಧಾನಗೊಂಡರು. ನಿರ್ಮಿತಿ ಕೇಂದ್ರದ ಇಂಜಿನಿಯರ್ ಗಣೇಶ್, ಮಂಗಳೂರಿನ ಕೆಎಫ್‌ಡಿಸಿ ಹಿರಿಯ ಮ್ಯಾನೇಜರ್ ಮಲ್ಲೇಶ್, ಪ್ರಾಜೆಕ್ಟ್ ಇಂಜಿನಿಯರ್ ಮನೋಹರ್, ಲೋಕೋಪಯೋಗಿ ಪರಿಶೀಲನಾ ಇಂಜಿನಿಯರ್ ಸಾಮ್ರಾಟ್ ಗೌಡ, ಐರೋಡಿ ಪಿಡಿಒ ಉಮಾಶಂಕರ್ ಮತ್ತಿತರರು ಇದ್ದರು.

ಸುಂಕ ಪಾವತಿಸುವುದಿಲ್ಲವೆಂದು ಪಟ್ಟು

ಐರೋಡಿ ಗ್ರಾಮ ಪಂಚಾಯಿತಿಯ ಪಿಡಿಒ ಬಳಿ ಮಹಿಳಾ ಮೀನುಗಾರರು ಮನವಿ ಮಾಡಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸದಿದ್ದಲ್ಲಿ ಸುಂಕ ನೀಡುವುದಿಲ್ಲ ಎಂದು ಪಟ್ಟು ಹಿಡಿದರು. ಈ ಸಂದರ್ಭ ಪಿಡಿಒ ತಮ್ಮ ನಿಸ್ಸಹಾಯಕತೆ ವ್ಯಕ್ತಪಡಿಸಿದರು.

ಮೀನುಗಾರಿಕಾ ಇಲಾಖೆ ಮೂಲಕ ಎನ್‌ಎಫ್‌ಡಿವಿ ಹೈದರಾಬಾದ್, ನಬಾರ್ಡ್ ಅನುದಾನದಡಿ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಮೀನುಮಾರುಕಟ್ಟೆ ಕಾಮಗಾರಿಯಲ್ಲಿ ಲೋಪವೆಸಗಲಾಗಿದೆ. ಕಟ್ಟಡಗಳ ನಿರ್ವಹಣೆ ವಿವಿಧ ಲೋಪಗಳು ಇವೆ ಎಂದು ಸಾಮಾಜಿಕ ಕಾರ್ಯಕರ್ತ ಥೋಮಸ್ ರೂಡ್ರಿಗಸ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಶುಭ.ಟಿ ನೇತೃತ್ವದ ಲೋಕಾಯುಕ್ತ ಅಧಿಕಾರಿಗಳ ತಂಡ ವಿವಿಧ ಇಲಾಖಾಧಿಕಾರಿಗಳ ಸಮ್ಮುಖದಲ್ಲಿ ಪರಿಶೀಲನೆ ನಡೆಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net