ಮಹಾರಾಷ್ಟ್ರ ತಲುಪಿದ ಮಿಡತೆಗಳ ಗುಂಪು, ಕರ್ನಾಟಕಕ್ಕೂ ಕಾದಿದೆಯಾ ಕಂಟಕ?

locusts
Published on

ನಾಗ್ಪುರ: ಬೆಳೆದು ನಿಂತಿರುವ ಪೈರಿನ ಮೇಲೆ ದಾಳಿ ಮಾಡಿ, ಅವನ್ನು ಭಕ್ಷಿಸಿ ಧ್ವಂಸಗೊಳಿಸುತ್ತಿರುವ ಮಿಡತೆಗಳ ಗುಂಪು ಮಹಾರಾಷ್ಟ್ರವನ್ನು ತಲುಪಿವೆ. ಮುಂದುವರಿದು ಇವು ಯಾವುದೇ ಕ್ಷಣದಲ್ಲಿ ಕರ್ನಾಟಕವನ್ನೂ ಪ್ರವೇಶಿಸಿ, ಬೆಳೆಗಳನ್ನು ಹಾಳು ಮಾಡುವ ಸಾಧ್ಯತೆ ದಟ್ಟವಾಗಿದೆ ಎಂಬ ಆತಂಕ ವ್ಯಕ್ತವಾಗುತ್ತಿದೆ.

ಮೊದಲಿಗೆ ಪಾಕಿಸ್ತಾನದಲ್ಲಿ ಕಾಣಿಸಿಕೊಂಡ ಮಿಡತೆಗಳ ಗುಂಪು, ಅಲ್ಲಿನ ಬೆಳೆಗಳನ್ನು ಹಾಳು ಮಾಡಿದವು. ಬಳಿಕ ಏಪ್ರಿಲ್​ 19ರಂದು ರಾಜಸ್ಥಾನದ ಮೂಲಕ ಭಾರತವನ್ನು ಪ್ರವೇಶಿಸಿದವು. ಅಲ್ಲೆಲ್ಲೆ ಬೆಳಗಳಿಗೆ ಹಾನಿ ಮಾಡುತ್ತಾ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶಗಳಿಗೂ ಹಬ್ಬಿ ಇದೀಗ ಮಹಾರಾಷ್ಟ್ರದ ನಾಗ್ಪುರದ ನಾರ್​ಖೇಡ್​ ಮತ್ತು ಕಟೋಲ್​ನಲ್ಲಿ ಹಾವಳಿ ಇಡುತ್ತಿವೆ.

ಇವು ವಿಶೇಷವಾಗಿ ತರಕಾರಿ ಮತ್ತು ಹಣ್ಣುಗಳ ಬೆಳೆಗಳ ಮೇಲೆ ದಾಳಿ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ರೈತರು ಬೆಳೆಗಳಿಗೆ ಕೀಟನಾಶಕ ಸಿಂಪಡಿಸಿ, ಮಿಡತೆಗಳ ದಾಳಿಯಿಂದ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

1974ರಲ್ಲಿ ಮಿಡತೆಗಳು ಕೊನೆಯ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದವು. ಅದಾದ ನಂತರದಲ್ಲಿ ಇದೀಗ ಮತ್ತೊಮ್ಮೆ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿವೆ. ಸದ್ಯ ಅವು ಅಮರಾವತಿಯ 12 ಗ್ರಾಮಗಳಲ್ಲಿ ದಾಳಿ ಇಟ್ಟಿರುವುದಾಗಿ ವಾರ್ಧಾ ಜಿಲ್ಲೆಯ ಕೃಷಿ ಅಧಿಕಾರಿ ಅನಿಲ್​ ಇಂಗ್ಲೆ ಹೇಳಿದ್ದಾರೆ.

ಪಕ್ಕದ ಮಹಾರಾಷ್ಟ್ರದಕ್ಕೆ ಬಂದಿರುವ ಮಿಡತೆಗಳ ಗುಂಪು ಯಾವುದೇ ಕ್ಷಣದಲ್ಲಾದರೂ ಕರ್ನಾಟಕವನ್ನು ಪ್ರವೇಶಿಸಿ, ಇಲ್ಲಿನ ಬೆಳೆಗಳನ್ನು ಹಾಳುವ ಮಾಡುವ ಸಾಧ್ಯತೆಗಳು ಇಲ್ಲದಿಲ್ಲ. ಈಗಾಗಲೆ ಕೋವಿಡ್​-19 ಲಾಕ್​ಡೌನ್​, ಬೆಲೆ ಕುಸಿತ ಸೇರಿ ನಾನಾ ಸಮಸ್ಯೆಗಳಿಂದ ಬಳಲುತ್ತಿರುವ ರೈತರು ಇದೀಗ ಮಿಡತೆಗಳಿಂದಲೂ ನಷ್ಟಕ್ಕೆ ಒಳಗಾಗುವ ಭೀತಿಗೆ ಸಿಲುಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net