ಕರ್ನಾಟಕಕ್ಕೂ ಮಿಡತೆಗಳು ದಾಂಗುಡಿ ಇಡುವುದು ಖಚಿತ: ಕೇಂದ್ರದ ಎಚ್ಚರಿಕೆ

locusts
Published on

ನವದೆಹಲಿ: ದೇಶದ ಉತ್ತರ ಭಾಗ ಮತ್ತು ಮಧ್ಯ ಭಾಗದಲ್ಲಿ ಹಾವಳಿ ಇಟ್ಟು, ಬೆಳೆದು ನಿಂತಿರುವ ಪೈರು, ಹಣ್ಣು, ತರಕಾರಿಗಳನ್ನು ಆಪೋಷಣ ಪಡೆದುಕೊಳ್ಳುತ್ತಿರುವ ಮಿಡತೆಗಳ ಸೈನ್ಯ ಕರ್ನಾಟಕದ ಹೊಲಗದ್ದೆಗಳು, ತೋಟಗಳ ಮೇಲೆ ದಾಳಿ ಮಾಡುವುದು ಖಚಿತ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

ಗುರುವಾರ ಸುದ್ದಿಗಾರರ ಜತೆ ಮಾತನಾಡಿದ್ದ ಕೃಷಿ ಸಚಿವ ಬಿ.ಸಿ. ಪಾಟೀಲ್​, ನೂರಕ್ಕೆ 99.99 ಭಾಗ ಮಿಡತೆಗಳು ಕರ್ನಾಟಕದ ಮೇಲೆ ದಾಳಿ ಮಾಡುವುದಿಲ್ಲ. ಗಾಳಿ ಬೀಸುವ ದಿಕ್ಕು ಬದಲಾಗಿರುವುದು ಇದಕ್ಕೆ ಕಾರಣ ಎಂದು ಖಚಿತವಾದ ಧ್ವನಿಯಲ್ಲಿ ಹೇಳಿದ್ದರು. ಆದರೂ ಮುನ್ನೆಚ್ಚರಿಕೆ ಕೈಗೊಳ್ಳುತ್ತಿರುವುದಾಗಿಯೂ ತಿಳಿಸಿದ್ದರು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಕರ್ನಾಟಕಕ್ಕೂ ಮಿಡತೆಗಳು ದಾಂಗುಡಿ ಇಡಲಿವೆ ಎಂಬ ಎಚ್ಚರಿಕೆ ರವಾನಿಸಿದೆ.

ಈಗಾಗಲೆ ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶ, ಗುಜರಾತ್​ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಹಾವಳಿ ಇಟ್ಟಿರುವ ಮಿಡತೆಗಳು ಇನ್ನು ಕೆಲವಾರಗಳಲ್ಲಿ ಕರ್ನಾಟಕ ಸೇರಿ ಇನ್ನೂ 12 ರಾಜ್ಯಗಳ ಮೇಲೆ ದಂಡೆತ್ತಿ ಹೋಗುವುದು ನಿಶ್ಚಿತ ಎಂದು ಹೇಳಿದ್ದಾರೆ.

ಜೂನ್​ ಮಧ್ಯಾವಧಿಯಲ್ಲಿ ಪಾಕಿಸ್ತಾನ ಕಡೆಯಿಂದ ಮಿಡತೆಗಳ ಇನಷ್ಟು ದಂಡುಗಳು ಭಾರತದ ಮೇಲೆ ದಂಡೆತ್ತಿ ಬರಲಿವೆ. ಈಗಾಗಲೆ ಇಲ್ಲಿ ದಾಂಗುಡಿ ಇಡುತ್ತಿರುವ ಮಿಡತೆಗಳ ದಂಡುಗಳೊಂದಿಗೆ ಇವುಗಳು ಸೇರಿಕೊಳ್ಳುವುದರಿಂದ, ಇವುಗಳ ಹಾವಳಿ ದೇಶಾದ್ಯಂತ ಹಬ್ಬುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಬೀದರ್​ ಜಿಲ್ಲೆಯನ್ನು ಮಿಡತೆಗಳ ದಂಡುಗಳು ಪ್ರವೇಶಿಸುವ ಸಾಧ್ಯತೆ ಇದೆ. ಇಲ್ಲಿಂದ ಅವು ತೆಲಂಗಾಣಕ್ಕೂ ಹಬ್ಬುವ ಸಾಧ್ಯತೆ ಇದೆ ಎಂದು ಸರ್ಕಾರಿ ಅಧಿಕಾರಿಗಳು ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net