

ನವದೆಹಲಿ: ವಿಶ್ವದಾದ್ಯಂತ ಲಾಕ್ಡೌನ್ ಇರುವ ಹಿನ್ನೆಲೆಯಲ್ಲಿ ಒಂದೇ ದೇಶದಲ್ಲಿ ಬೇರೆ ಬೇರೆ ಊರುಗಳಲ್ಲಿ ಸಿಲುಕಿ ತೊಂದರೆ ಪಡುತ್ತಿರುವವರ ಪಾಡು ಒಂದೆಡೆಯಾದರೆ, ಬೇರೆ ದೇಶಗಳಲ್ಲಿ ನೆಲೆಸಿ ತಾಯ್ನಾಡಿಗೆ ಹಿಂದಿರುಗಲು ಸಾಧ್ಯವಾಗದವರ ಗೋಳು ಇನ್ನೊಂದೆಡೆ.
ದುಬೈನಲ್ಲಿ ನೆಲೆಸಿರುವ ಭಾರತೀಯ ಮೂಲದ ಗರ್ಭಿಣಿಯೊಬ್ಬರು ದುಬೈನಲ್ಲಿ ತಮ್ಮ ಆರೈಕೆ ಮಾಡಲು ಯಾರೂ ಇಲ್ಲದ ಹಿನ್ನೆಲೆಯಲ್ಲಿ ತವರಿಗೆ ಮರಳಲು ವ್ಯವಸ್ಥೆ ಮಾಡುವಂತೆ ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.
ಕೇರಳದ ಕೋಝಿಕೋಡ್ ನಿವಾಸಿಯಾಗಿರುವ ಅಥಿರಾ ಗೀತಾ ಶ್ರೀಧರನ್ ಎಂಬ ಆರು ತಿಂಗಳ ಗರ್ಭಿಣಿ ತವರಿಗೆ ವಾಪಸಾಗಲು ಬಯಸಿ ದಾರಿ ಕಾಣದೇ ನ್ಯಾಯಾಲಯದ ಮೊರೆ ಹೊಕ್ಕಿದ್ದಾರೆ. ಎಲ್ಲಾ ವಿಮಾನಗಳು ಬಂದ್ ಆಗಿರುವ ಹಿನ್ನೆಲೆಯಲ್ಲಿ, ತಮಗೆ ಬೇರೆ ಏನಾದರೂ ವ್ಯವಸ್ಥೆ ಮಾಡುವಂತೆ ಭಾರತ ಸರ್ಕಾರಕ್ಕೆ ಆದೇಶಿಸಬೇಕು ಎನ್ನುವುದು ಅವರ ಮನವಿ.
ಅಥಿರಾ ಗೀತಾ ಅವರು ಹೇಳಿರುವಂತೆ, ಅವರಿಗೆ ಜುಲೈ ತಿಂಗಳಿನಲ್ಲಿ ಪ್ರಸವದ ದಿನಾಂಕ ಗೊತ್ತು ಮಾಡಲಾಗಿದೆ. ಅವರು ದುಬೈನಲ್ಲಿ ಪತಿಯ ಜತೆ ನೆಲೆಸಿದ್ದಾರೆ. ಅವರ ಪತಿ ಕಟ್ಟಡ ಕಾಮಗಾರಿಯಲ್ಲಿ ದುಬೈನಲ್ಲಿ ಕೆಲಸ ಮಾಡುತ್ತಿದ್ದು, ಅವರಿಗೆ ಲಾಕ್ಡೌನ್ ಹೊರತಾಗಿಯೂ ಅಲ್ಲಿ ಕಚೇರಿಗೆ ಹೋಗಲೇಬೇಕಾದ ಅನಿವಾರ್ಯತೆ ಇದೆ. ಅಷ್ಟೇ ಅಲ್ಲದೇ, ಅವರಿಗೆ ಈ ಸಮಯದಲ್ಲಿ ರಜೆ ಕೂಡ ಸಿಗುತ್ತಿಲ್ಲ. ಆದ್ದರಿಂದ ಪತ್ನಿಯನ್ನು ನೋಡಿಕೊಳ್ಳುವುದು ಅವರಿಗೆ ಕಷ್ಟವಾಗಿದೆ. ಈಗ ಅವರ ಆರೋಗ್ಯದಲ್ಲಿ ಸಮಸ್ಯೆ ಆಗಿರುವ ಕಾರಣ, ತುರ್ತಾಗಿ ಭಾರತಕ್ಕೆ (ತವರಿಗೆ) ವಾಪಸಾಗಬೇಕಾಗಿದೆ.
‘ನಾನು ಮೇ ಎರಡನೆಯ ವಾರದವರೆಗೆ ಮಾತ್ರ ಪ್ರಯಾಣ ಮಾಡಲು ಅವಕಾಶವಿದೆ. ಆ ನಂತರ ಪ್ರಯಾಣ ಮಾಡಬಾರದು ಎಂದು ವೈದ್ಯರು ಹೇಳಿದ್ದಾರೆ. ಆದರೆ ಲಾಕ್ಡೌನ್ ದಿನಾಂಕ ಮುಗಿಯುವ ಬಗ್ಗೆ ಯಾವುದೇ ಸ್ಪಷ್ಟ ದಿನಾಂಕ ಹೇಳುವುದು ಇದೀಗ ಕಷ್ಟವಾಗಿದೆ. ದುಬೈ ಮತ್ತು ಭಾರತದ ಎರಡೂ ಕಡೆಗಳಲ್ಲಿ ಲಾಕ್ಡೌನ್ ಅವಧಿ ವಿಸ್ತಾರವಾದರೆ ತಮಗೆ ಅತೀವ ತೊಂದರೆ ಆಗುತ್ತದೆ. ಹಾಗಾದರೆ ನನಗೆ ಮತ್ತು ಮಗುವಿನ ಪ್ರಾಣಕ್ಕೆ ಹಾನಿ ಇದೆ’ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ. ತಮ್ಮಂತೆಯೇ ಅನೇಕ ಮಂದಿ ದುಬೈನಿಂದ ಭಾರತಕ್ಕೆ ಬರಲು ಪ್ರಯತ್ನಿಸುತ್ತಿದ್ದಾರೆ. ಅವರಿಗೂ ನೆರವಾಗಿ ಎಂದು ಕೋರಿದ್ದಾರೆ. (ಏಜೆನ್ಸೀಸ್)