

ಪಾಟ್ನ: ಕಳೆದ ತಿಂಗಳು ಲಾಕ್‌ಡೌನ್ ಸಮಯದಲ್ಲಿ ಬಿಹಾರ ಜಿಲ್ಲೆಯ ಪಟ್ನಾದ 15 ವರ್ಷದ ಬಾಲಕಿ ಜ್ಯೋತಿ ಕುಮಾರಿ ತೋರಿದ ಸಾಹಸ ವಿಶ್ವದೆಲ್ಲೆಡೆ ಪ್ರತಿಧ್ವನಿಸಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪತ್ನಿ ಇವಾಂಕಾ ಅವರವರೆಗೂ ಈ ಸುದ್ದಿ ತಲುಪಿ ಬಾಲಕಿಯ ಸಾಹಸವನ್ನು ಕೊಂಡಾಡಿದ್ದರು.
ಜ್ಯೋತಿ ಕುಮಾರಿ ಎಂಬ ಬಾಲಕಿ ತನ್ನ ಅನಾರೋಗ್ಯ ತಂದೆಯನ್ನು ಚಿಕಿತ್ಸೆಗೆ ಹರಿಯಾಣದ ಗುರುಗ್ರಾಮದಿಂದ ಬಿಹಾರದ ದರ್ಬಾಂಗಗೆ ಸೈಕಲ್ ನಲ್ಲಿ ಕರೆತಂದಿದ್ದಳು.ಲಾಕ್‌ಡೌನ್‌ನಿಂದಾಗಿ ಗುರುಗ್ರಾಮದಲ್ಲಿ ಕೆಲಸವಿಲ್ಲದೇ ಕಂಗಾಲಾಗಿದ್ದ ತಂದೆಗೆ ಧೈರ್ಯ ತುಂಬಿದ್ದ 8ನೇ ತರಗತಿಯ ಜ್ಯೋತಿ ಅಕ್ಷರಶಃ ಅಪ್ಪನ ಬಾಳಲ್ಲಿ ಜ್ಯೋತಿಯನ್ನೇ ಬೆಳಗಿದ್ದಳು. ಸೈಕಲ್ ನಲ್ಲಿ ತಂದೆಯನ್ನು ಕೂರಿಸಿಕೊಂಡು ಸಾವಿರಾರು ಕಿಲೋಮೀಟರ್ ದೂರದ ಮನೆಗೆ ಪ್ರಯಾಣಿಸಿದ್ದಳು.
ದಿನಕ್ಕೆ 100ರಿಂದ 150 ಕಿಲೋ ಮೀಟರ್ ಸೈಕಲ್ ತುಳಿದು ವಾರದಲ್ಲಿಯೇ ತಂದೆಯನ್ನು ತುಳಿದಿದ್ದೇನೆ. ಸೈಕಲ್ ತುಳಿದು ಸುಸ್ತಾದಾಗ ಅಲ್ಲಲ್ಲಿ ನಿಲ್ಲಿಸಿ ಮುಖಕ್ಕೆ ನೀರು ಚಿಮುಕಿಸಿ ನೀರು ಕುಡಿದು ದಣಿವಾರಿಸಿಕೊಳ್ಳುತ್ತಿದ್ದೆ. ಬಿಸ್ಕೆಟ್ ತಿಂದು ನೀರು ಕುಡಿಯುತ್ತಾ, ತಂದೆಗೆ ಸಹ ಕೊಡುತ್ತಾ ಮನೆಗೆ ಸುರಕ್ಷಿತವಾಗಿ ತಲುಪಿದೆ ಎಂದು ಹೇಳಿದ್ದಳು ಜ್ಯೋತಿ.
ಇದನ್ನೂ ಓದಿ:
ಈಕೆಯ ಸುದ್ದಿ ಎಲ್ಲೆಡೆ ಪ್ರಸಾರ ಆಗುತ್ತಿದ್ದಂತೆಯೇ ಶ್ರವಣ ಕುಮಾರಿ ಎಂಬ ಬಿರುದೂ ಈಕೆಗೆ ಸಿಕ್ಕಿತ್ತು. ಬಾಲಕಿಯ ವಿಷಯ ತಿಳಿದ ದರ್ಬಾಂಗ ಜಿಲ್ಲಾಧಿಕಾರಿ ಡಾ ತ್ಯಾಗರಾಜನ್ ಆಕೆಯ ಮುಂದಿನ ಶಿಕ್ಷಣಕ್ಕೆ ಮತ್ತು ಮನೆಯವರಿಗೆ ಸಾಧ್ಯವಾಗುವ ಎಲ್ಲಾ ನೆರವು ಕೊಡಿಸುವುದಾಗಿ ಭರವಸೆ ಕೂಡ ನೀಡಿದ್ದರು.
ಅಷ್ಟೇ ಏಕೆ, ಈ ಸುದ್ದಿ ಅಮೆರಿಕವನ್ನೂ ತಲುಪಿ ಇವಾಂಕಾ ಟ್ರಂಪ್ ಜ್ಯೋತಿಯ ದಿಟ್ಟ ಸಾಹಸವನ್ನು ಕೊಂಡಾಡಿದ್ದರು. “ಇದೊಂದು ವಾತ್ಸಲ್ಯ ಹಾಗೂ ಸಹಿಷ್ಣುತೆಯ ಸುಮಧುರ ಹೆಜ್ಜೆ’ ಎಂಬುದಾಗಿ ಇವಾಂಕಾ ಟ್ರಂಪ್ ಹೊಗಳಿದ್ದರು.
ಇಂಥ ಅಪರೂಪದ ಸಾಹಸ ಮಾಡಿದ ಜ್ಯೋತಿ ಕುಮಾರಿಯ ಸಾಹಸಗಾಥೆಯೀಗ ಚಲನಚಿತ್ರವಾಗುತ್ತಿದೆ. ಇದರಲ್ಲಿ ಜ್ಯೋತಿಯೇ ನಟಿಸಲು ನಿರ್ದೇಶಕ ಶಿನೆ ಕೃಷ್ಣ ಕೋರಿಕೊಂಡಿದ್ದಾರೆ. ಅದಕ್ಕೆ ಬಾಲಕಿ ಕೂಡ ಒಪ್ಪಿಕೊಂಡಿದ್ದಾಳೆ.
ವಿಮೇಕ್‌ಫಿಲ್ಮ್ ಬ್ಯಾನರ್ ಅಡಿ ಬರುವ ಆಗಸ್ಟ್‌ನಲ್ಲಿ ಇದು ಸೆಟ್ಟೇರುವ ನಿರೀಕ್ಷೆ ಇದೆ. ಈ ಚಿತ್ರವನ್ನು ಹಿಂದಿ, ಇಂಗ್ಲಿಷ್ ಮತ್ತು ಮೈಥಿಲಿ ಭಾಷೆಗಳಲ್ಲಿ ನಿರ್ಮಿಸಲಾಗುವುದು ಮತ್ತು ಇತರ ಭಾಷೆಗಳಿಗೆ ಡಬ್ ಮಾಡಲಾಗುತ್ತದೆ. ಅಂತಾರಾಷ್ಟ್ರೀಯ ಪ್ರೇಕ್ಷಕರ ಸಲುವಾಗಿ 20 ಭಾಷೆಗಳಲ್ಲಿ ಉಪಶೀರ್ಷಿಕೆ ಮಾಡಲಾಗುವುದು ಎಂದು ಕೃಷ್ಣ ಹೇಳಿದರು.